
ಸತೀಶ್ ನೀನಾಸಂ ನಟಿಸುತ್ತಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲು ಹಾಡು ‘ಏಳೋ ಮಾದೇವ’ ಇತ್ತೀಚೆಗೆ ರಿಲೀಸ್ ಆಯಿತು. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ.
‘ಅಶೋಕ ಬ್ಲೇಡ್’ ಎಂಬ ಶೀರ್ಷಿಕೆಯಲ್ಲಿ ಆರಂಭವಾಗಿದ್ದ ಈ ಸಿನಿಮಾ ನಿರ್ದೇಶಕ ವಿನೋದ್ ದೋಂಡಾಳೆ ನಿಧನದ ಬಳಿಕ ‘ದಿ ರೈಸ್ ಆಫ್ ಅಶೋಕ’ ಆಗಿತ್ತು. ಹಾಡು ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಸತೀಶ್, ‘ನಾನು ಮನೆಯಲ್ಲಿ ಮಲಗಿದ್ದರೂ ಜನ ‘ಅಯೋಗ್ಯ–2’ ಸಿನಿಮಾ ನೋಡುತ್ತಾರೆ ಎನ್ನುವ ಭರವಸೆ ಇದೆ. ಇದಕ್ಕೆ ಆ ಸಿನಿಮಾಗಿರುವ ಬ್ರ್ಯಾಂಡ್ ಕಾರಣವಾಗುತ್ತದೆ. ಆದರೆ ‘ದಿ ರೈಸ್ ಆಫ್ ಅಶೋಕ’ ಸಿನಿಮಾಗೆ ಹಾಗಲ್ಲ. ಈ ಸಿನಿಮಾ ಶುರುವಾದಾಗ ಹಾಕಿಕೊಂಡಿದ್ದ ಬಜೆಟ್ ಬೇರೆಯಾಗಿತ್ತು. ಮುಗಿದಾಗ ಆದ ಬಜೆಟ್ ಬೇರೆಯಾಗಿತ್ತು. ಪ್ಯಾನ್ ಇಂಡಿಯಾ ಹುಚ್ಚಿಗಾಗಿ ಈ ಸಿನಿಮಾ ಮಾಡಿಲ್ಲ. ಸಿನಿಮಾ ಚೆನ್ನಾಗಿ ಆಗಬೇಕು, ನಮ್ಮ ಸಿನಿಮಾನೂ ಆ ಮಟ್ಟಕ್ಕೆ ಬೆಳೆಯಬೇಕು ಎಂದು ಕನಸು ಕಾಣುವುದು ತಪ್ಪಲ್ಲವಲ್ಲ. ಹಾಗೆ ಶುರುವಾದ ಪಯಣ ಇದು. ನನ್ನ ಬಳಿ ಕಥೆ ಬಂದಾಗ ನನಗೂ ಕಥೆ ಇಷ್ಟವಾಗಿತ್ತು. ನಿರ್ದೇಶಕರಾದ ವಿನೋದ್ ನಿಧನರಾದ ಬಳಿಕ ಈ ಸಿನಿಮಾದ ತೇರು ಎಳೆಯಲು ಉಳಿದದ್ದು ನಾನೊಬ್ಬನೇ. ಈ ಕನಸನ್ನು, ಸವಾಲನ್ನು ಹೊತ್ತು ನಾನು ಹೆಜ್ಜೆ ಹಾಕಿದೆ. ಮೂರು ವರ್ಷಗಳ ಕಾಲ ಒದ್ದಾಡಿ ಹಲವು ಕಷ್ಟಗಳ ಮಧ್ಯೆ ಸಿನಿಮಾ ಶೂಟಿಂಗ್ ನಡೆಸಿದ್ದೇವೆ’ ಎಂದರು.
‘ಕಷ್ಟಪಟ್ಟು ಸಿನಿಮಾ ಮಾಡಿದರೆ ಗೆದ್ದೇ ಗೆಲ್ಲುತ್ತೇವೆ. ಎರಡು ಮೂರು ಆಯ್ಕೆಗಳಲ್ಲಿ ತಪ್ಪು ಮಾಡಿದ್ದೆ. ಆದರೆ ಮುಂದೆ ಇಂತಹ ತಪ್ಪು ಮಾಡಲ್ಲ. ಉತ್ತಮ ಗುಣಮಟ್ಟದ, ಕಾಂಟೆಂಟ್ ಇರುವ ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ. ಸಿನಿಮಾ ಪಯಣವನ್ನು ಬೇರೆ ಬೇರೆ ರಾಜ್ಯಗಳಿಗೆ ವಿಸ್ತರಿಸುತ್ತೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.
‘ಎಲ್ಲಾ ಯುದ್ಧಗಳೂ ರಣರಂಗದಲ್ಲೇ ನಡೆಯುವುದಿಲ್ಲ’ ಎನ್ನುವ ಅಡಿಬರಹವಿರುವ ಈ ಸಿನಿಮಾವನ್ನು ವರ್ಧನ್ ಹರಿ ಜೊತೆಗೂಡಿ ಸತೀಶ್ ನಿರ್ಮಾಣ ಮಾಡಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಬಿ.ಸುರೇಶ, ಗೋಪಾಲಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಈ ಸಿನಿಮಾದಲ್ಲಿ ಒಂಬತ್ತು ಹಾಡುಗಳಿವೆ. ಮೂರು ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ. 27 ಟ್ರ್ಯಾಕ್ ರೆಕಾರ್ಡ್ ಮಾಡಿ ದೊಡ್ಡಮಟ್ಟದಲ್ಲಿ ರಿರೆಕಾರ್ಡಿಂಗ್ ಮಾಡಿದ್ದೇವೆ.–ಪೂರ್ಣಚಂದ್ರ ಮೈಸೂರು ಸಂಗೀತ ನಿರ್ದೇಶಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.