
ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿರುವ ‘ಸೀಟ್ ಎಡ್ಜ್’ ಚಿತ್ರ ಜ.30ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಡಾರ್ಕ್ ಕಾಮಿಡಿಯ ಜೊತೆಗೆ ಹಾರರ್-ಥ್ರಿಲ್ಲರ್ ಜಾನರ್‌ನ ಈ ಸಿನಿಮಾವನ್ನು ಚೇತನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿದ್ದು ಅವರಿಗೆ ಜೋಡಿಯಾಗಿ ರವೀಕ್ಷಾ ಶೆಟ್ಟಿ ಬಣ್ಣಹಚ್ಚಿದ್ದಾರೆ. ಎರಡು ಶೇಡ್‌ಗಳಲ್ಲಿ ಅವರ ಪಾತ್ರವಿದೆ.
ಚಿತ್ರದ ಕುರಿತು ಮಾತನಾಡಿದ ಸಿದ್ದು, ‘ಸಿನಿಮಾದ ಯಾವುದೇ ಹಿನ್ನೆಲೆ ಇಲ್ಲದೆ ‘ರಂಗಿತರಂಗ’ದಿಂದ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದವನು ನಾನು. ನಿರ್ದೇಶಕರು ಭಿನ್ನವಾದ ಪಾತ್ರಗಳ ಅವಕಾಶ ನೀಡುತ್ತಿದ್ದಾರೆ. ಇದಕ್ಕೆ ‘ಲವ್ ಯು ಮುದ್ದು’ ಒಂದು ಉದಾಹರಣೆ. ‘ಸೀಟ್ ಎಡ್ಜ್’ ಸಿನಿಮಾ ಕಾಂಟೆಂಟ್ ಕ್ರಿಯೇಟರ್ಸ್‌ಗಳ ಮೇಲಿದೆ. ಹೀಗಾಗಿ ಜನರಿಗೆ ಹತ್ತಿರವಾಗುವ ಬಹಳ ವಿಷಯಗಳು ಇಲ್ಲಿವೆ. ಓರ್ವ ವ್ಲಾಗರ್‌ನ ಕಥೆ ಇಲ್ಲಿದೆ. ವ್ಲಾಗರ್ಸ್ ತಮಗೆ ಕಂಡಿದ್ದೆಲ್ಲವನ್ನೂ ಸೆರೆ ಹಿಡಿಯುವುದು ಪ್ರೇಕ್ಷಕರಿಗಾಗಿಯೇ. ಜನರು ಸಿನಿಮಾಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಇಂತಹ ಚಾನೆಲ್‌ಗಳನ್ನು ನೋಡುತ್ತಿರುತ್ತಾರೆ. ಯಾರೂ ಹೋಗದ ಒಂದು ನಿಗೂಢ ಜಾಗವನ್ನು ಪ್ರೇಕ್ಷಕರಿಗೆ ವ್ಲಾಗ್ ಮೂಲಕ ಪರಿಚಯಿಸಬೇಕು ಎಂಬ ಹಟ ನಾಯಕನಿಗೆ. ಇಂಥ ಒಂದು ಘೋಸ್ಟ್ ಟೌನ್‌ಗೆ ಹೋಗಿ ಘೋಸ್ಟ್ ಹಂಟಿಂಗ್ ವಿಡಿಯೊ ಮಾಡುತ್ತಾನೆ. ಆ ಸಂದರ್ಭದಲ್ಲಿ ಎದುರಾಗುವ ಘಟನೆಗಳೇ ಚಿತ್ರದ ಕಥೆ’ ಎಂದಿದ್ದಾರೆ.
ಚಿತ್ರದಲ್ಲಿ ಹಾಸ್ಯ ಮತ್ತು ಹಾರರ್ ಅಂಶಗಳ ಮಿಶ್ರಣವಿದೆ ಎನ್ನುವುದಕ್ಕೆ ಸಾಕ್ಷಿಯಂತಿದೆ ಟ್ರೇಲರ್. ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಜೋಡಿ ಸಿನಿಮಾದಲ್ಲಿದೆ. ನಟಿ ರವೀಕ್ಷಾ ಶೆಟ್ಟಿ ಅವರಿಗೆ ಇದು ಮೊದಲ ಸಿನಿಮಾ. ಸಿನಿಮಾದಲ್ಲಿ ಏರೋಬಿಕ್ಸ್ ಟೀಚರ್ ಆಗಿ ಇವರು ಬಣ್ಣಹಚ್ಚಿದ್ದಾರೆ. ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಗಿರಿಧರ ಟಿ.ವಸಂತಪುರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೀಪಕ್ ಕುಮಾರ್ ಜೆ.ಕೆ.ಛಾಯಾಚಿತ್ರಗ್ರಹಣ, ಆಕಾಶ್ ಪರ್ವ ಸಂಗೀತ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.