ADVERTISEMENT

ಹಿರಿಯ ಪತ್ರಕರ್ತ, ನಟ ಸುರೇಶ್‌ಚಂದ್ರ ನಿಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 10:05 IST
Last Updated 11 ಜೂನ್ 2021, 10:05 IST
ಸುರೇಶ್‌ಚಂದ್ರ
ಸುರೇಶ್‌ಚಂದ್ರ   

ಬೆಂಗಳೂರು: ಹಿರಿಯ ಪತ್ರಕರ್ತ, ನಟ ಸುರೇಶ್‌ಚಂದ್ರ (69) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆತುಮಕೂರು ಜಿಲ್ಲೆಯ ಮಧುಗಿರಿಯ ಲಿಂಗೇನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ದೀರ್ಘಕಾಲ ಸಿನಿಮಾ, ರಾಜಕೀಯ ಕ್ಷೇತ್ರದ ಪತ್ರಕರ್ತರಾಗಿ ಸಂಜೆವಾಣಿ ಪತ್ರಿಕೆಯಲ್ಲಿ ಅವರು ದುಡಿದಿದ್ದರು.

ಸರಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸಿನಿಮಾ, ರಂಗಭೂಮಿ, ಸಂಗೀತದ ಅಭಿರುಚಿ ಹೊಂದಿದ್ದ ಅವರು ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯವಾಗಿದ್ದರು.

ಭಾರತೀಯ ವಿದ್ಯಾಭವನದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಮಾಡಿದ್ದರು. ‘ಪ್ರಜಾವಾಣಿ’ಯಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್‌ ಮೂಲಕ ಪತ್ರಿಕೋದ್ಯಮಕ್ಕೆ ಮೊದಲ ಹೆಜ್ಜೆಇಟ್ಟಿದ್ದ ಸುರೇಶ್‌ಚಂದ್ರ ಅವರು ‘ಸಂಜೆವಾಣಿ’ಗೆ ಸೇರಿ ಅಲ್ಲಿಯೇ ಮುಂದುವರಿದು ಸಂಪಾದಕರಾಗಿ ನಿವೃತ್ತರಾಗಿದ್ದರು.

ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದ ಅವರು, ಎಸ್‌.ನಾರಾಯಣ್‌ ನಿರ್ದೇಶನದ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ‘ಚೆಲುವಿನ ಚಿತ್ತಾರ’ದಲ್ಲಿ ನಾಯಕಿಯ ಅಪ್ಪನ ಪಾತ್ರದ ಮುಖಾಂತರ, ಖ್ಯಾತಿಪಡೆದಿದ್ದರು. ಅವರು ನಟಿಸಿದ ಚಿತ್ರಗಳ ‘ನಂದ ಲವ್ಸ್‌ ನಂದಿತ’, ‘ಜಂಗ್ಲಿ’, ‘ಉಗ್ರಂ’ ಸಿನಿಮಾಗಳು ಹಿಟ್‌ ಆಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.