
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ವಿಚಾರವಾಗಿ ನಟ ಧನುಷ್ ರಾಜ್ ಹಾಗೂ ಅವರ ಪತ್ನಿ ಆಶ್ರಿತಾ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಸಂಬಂಧ ಗಿರಿನಗರ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಒಂಬತ್ತು ತಿಂಗಳ ಹಿಂದೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು.
‘ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದೆ. ಅದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಆಶ್ರಿತಾ ಅವರು ಅನುಮಾನ ಪಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹೊರಗಿನಿಂದ ಗೂಂಡಾಗಳನ್ನು ಕರೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಶ್ರಿತಾ ಅವರೇ ಶೌಚಾಲಯದ ಕೊಠಡಿಗೆ ತೆರಳಿ ಗಾಜು ಒಡೆದುಕೊಂಡು ಕೈಗೆ ಚುಚ್ಚಿಕೊಂಡಿದ್ದರು. ಅದನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿ ಧನುಷ್ ಅವರು ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.
‘ಧನುಷ್ ಅವರಿಗೆ ಬೇರೆ ಹುಡುಗಿಯ ಜತೆಗೆ ಸ್ನೇಹವಿದೆ. ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಫೋಟೋಗಳು ಸಿಕ್ಕಿದ್ದವು. ಸುಳ್ಳು ಹೇಳಿ ವಿದೇಶಕ್ಕೆ ಹೋಗಿದ್ದರು. ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾರೆ’ ಎಂದು ಆಶ್ರಿತಾ ಅವರು ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣಕ್ಕೆ ಬೇಡಿಕೆ: ‘ಮದುವೆ ಸಂದರ್ಭದಲ್ಲಿ ಪೋಷಕರು 50 ಗ್ರಾಂ ಚಿನ್ನಾಭರಣ ನೀಡಿದ್ದರು. ಈಗ ಮತ್ತೆ ₹8 ಲಕ್ಷ ಹಣ ತರುವಂತೆ ಪೀಡಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.
‘ಶಿವಾಜಿ ಸೂರತ್ಕಲ್’ ಸೇರಿದಂತೆ ಕೆಲವು ಸಿನಿಮಾ ಹಾಗೂ ಕಿರುತೆರೆಯಲ್ಲಿ ಧನುಷ್ ರಾಜ್ ಅವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.