ADVERTISEMENT

ಶರ್ವಾನಂದ - ಸಮಂತಾ ಮುಂದಿನ ಚಿತ್ರ 'ಜಾನು'

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:45 IST
Last Updated 9 ಜನವರಿ 2020, 19:45 IST
ಸಮಂತಾ
ಸಮಂತಾ   

ವಿಜಯ್‌ ಸೇತುಪತಿ ಹಾಗೂ ತ್ರಿಷಾ ಅಭಿನಯದ ತಮಿಳು ಸಿನಿಮಾ ‘96’ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈ ಚಿತ್ರ ಈಗಾಗಲೇ ಕನ್ನಡಕ್ಕೆ ರಿಮೇಕ್‌ ಆಗಿದ್ದು, ಅದರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಭಾವನಾ ನಟಿಸಿದ್ದಾರೆ.

ಈ ಚಿತ್ರ ಈಗ ತೆಲುಗಿಗೆ ರಿಮೇಕ್‌ ಆಗುತ್ತಿದೆ. ಇದರಲ್ಲಿ ಮುಖ್ಯಪಾತ್ರದಲ್ಲಿ ನಟಿ ಸಮಂತಾ ಹಾಗೂ ನಟ ಶರ್ವಾನಂದ ನಟಿಸುತ್ತಿದ್ದಾರೆ. ಅನೇಕ ದಿನಗಳಿಂದ ಸಮಂತಾ ಅಕ್ಕಿನೇನಿ ಹಾಗೂ ಶರ್ವಾನಂದ ನಟನೆಯ ಈ ಹೊಸ ಚಿತ್ರದ ಬಗ್ಗೆ ಹೊಸ ಹೊಸ ಸುದ್ದಿಗಳು ಹರಿದಾಡುತ್ತಿವೆ. ಈಗ ಈ ಸಿನಿಮಾಕ್ಕೆ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸಿನಿಮಾಕ್ಕೆ ‘ಜಾನು’ ಶೀರ್ಷಿಕೆ ಇಟ್ಟಿರುವುದಾಗಿ ಚಿತ್ರತಂಡ ಬಹಿರಂಗಪಡಿಸಿದೆ.

‘ಜಾನು’ ಪೋಸ್ಟರನ್ನು ಶರ್ವಾನಂದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ಅಪರಿಮಿತ ಪ್ರೀತಿಗೆ ಅರ್ಪಣೆ. ಇಲ್ಲಿ ನನ್ನ ಮುಂದಿನ ಸಿನಿಮಾ ಜಾನು ಫಸ್ಟ್‌ ಲುಕ್‌ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

ಇನ್ನೊಂದೆಡೆ ಸಮಂತಾ ಕೂಡ ತಮ್ಮ ಈ ಹೊಸ ಚಿತ್ರದ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ‘ಇದು ನನಗೆ ಮತ್ತೊಂದು ವಿಶೇಷ ಸಿನಿಮಾ. ಇಲ್ಲಿತನಕ ಮಾಡಿದ ಪಾತ್ರಗಳಿಗಿಂತ ಇದು ಮತ್ತೊಂದು ಸವಾಲಿನ ಪಾತ್ರ. ಪ್ರತಿದಿನ ಮ್ಯಾಜಿಕ್‌ ಮಾಡಲು ಅವಕಾಶ ಸಿಕ್ಕಿದೆ. ಜಾನು ನನ್ನ ಜೀವನದ ಅತ್ಯಂತ ದೊಡ್ಡ ಸಿನಿಮಾ’ ಎಂದು ಹೇಳಿಕೊಂಡಿದ್ದಾರೆ.

ಈ ಚಿತ್ರವನ್ನು ಸಿ. ಪ್ರೇಮಕುಮಾರ್‌ ನಿರ್ದೇಶಿಸಲಿದ್ದಾರೆ. ಸಂಗೀತ ಸಂಯೋಜನೆ ಗೋವಿಂದ ವಸಂತನ್‌ ಅವರದು. ದಿಲ್‌ ರಾಜು ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.