ADVERTISEMENT

35 ಆಯ್ತು...50 ವರ್ಷದವರೆಗೂ ಸಿನಿಮಾ ಮಾಡೋಣ: ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 13:52 IST
Last Updated 19 ಫೆಬ್ರುವರಿ 2021, 13:52 IST
35ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌
35ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌   

ಬೆಂಗಳೂರು: ಚಂದನವನದ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಸಿನಿ ರಂಗದಲ್ಲಿ 35 ವರ್ಷಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಂಭ್ರಮದಿಂದ ಈ ಕ್ಷಣವನ್ನು ಆಚರಿಸಿದ್ದಾರೆ. ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಜೊತೆಯಾದ ಶಿವರಾಜ್‌ಕುಮಾರ್‌, ‘35 ವರ್ಷ ಕಳೆಯಿತು, 50 ವರ್ಷದವರೆಗೂ ಸಿನಿಮಾ ಮಾಡೋಣ’ ಎಂದು ಇದೇ ವೇಳೆ ಅಭಿಮಾನಿಗಳ ಹರ್ಷ ಹೆಚ್ಚಿಸಿದರು.

ಸುದ್ದಿಗಾರರೊಂದಿಗೆ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಶಿವರಾಜ್‌ಕುಮಾರ್‌, ‘35 ವರ್ಷ ಹೇಗೆ ಕಳೆಯಿತು ಎನ್ನುವುದೇ ಗೊತ್ತಿಲ್ಲ. 1986ರಿಂದ 2021ರವರೆಗಿನ ಪಯಣವನ್ನು ತಿರುಗಿ ನೋಡಿದರೆ ವರ್ಷ ಹೇಗೆ ಕಳೆಯಿತು ಎನ್ನುವುದೇ ತಿಳಿಯುವುದಿಲ್ಲ. ಜನರು ಪ್ರೀತಿಯಿಂದ ಈ ರೀತಿ ಸಂಭ್ರಮ ಆಚರಿಸುತ್ತಾರೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಡೀ ಸಿನಿ ಇಂಡಸ್ಟ್ರೀಗೆ ಧನ್ಯವಾದ ಹೇಳುತ್ತೇನೆ. ಅಪ್ಪಾಜಿ, ಸಹ ನಟರು, ನಿರ್ಮಾಪಕರು, ನಿರ್ದೇಶಕರು ಶಿವಣ್ಣನ ಕೈಬಿಟ್ಟಿಲ್ಲ. ಇನ್ನೂ ಸಿನಿಮಾದಲ್ಲಿ ನಟನೆ ಮಾಡುವ ಶಕ್ತಿಯನ್ನು ಅಭಿಮಾನಿಗಳ ಪ್ರೀತಿ ನೀಡಿದೆ. ಶಕ್ತಿ ದುಪ್ಪಟ್ಟಾಗಿದೆ. ಇನ್ನೂ 50 ವರ್ಷ ಮಾಡೋಣ..’ಎಂದು ಮುಗುಳ್ನಕ್ಕರು.

‘ಅಭಿಮಾನಿಗಳ ಬೆಂಬಲದ ಜೊತೆಗೆ, ಕುಟುಂಬದ ಸದಸ್ಯರು, ಸಿನಿಮಾ ಕ್ಷೇತ್ರದಲ್ಲಿರುವ ಇತರರರ ಬೆಂಬಲವೂ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ನೈತಿಕ ಬೆಂಬಲವಿದ್ದರಷ್ಟೇ ಇಷ್ಟೆಲ್ಲ ಸಾಧಿಸಲು ಸಾಧ್ಯ’ ಎಂದರು.

ADVERTISEMENT

‘ಮೊದಲ ದಿನ ನಾನು ಅತ್ತಿದ್ದೆ’

ಆನಂದ್‌ ಚಿತ್ರದ ಮುಹೂರ್ತದ ದಿನವನ್ನು ನೆನಪಿಸಿಕೊಂಡ ಅವರು, ‘ಚಿತ್ರದ ಮುಹೂರ್ತ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿತ್ತು. ಅಪ್ಪಾಜಿ, ಅಮ್ಮ, ಉದಯ್‌ಶಂಕರ್‌ ಅವರು ಸೇರಿದಂತೆ ಇಡೀ ಗಾಂಧಿನಗರವೇ ಅಲ್ಲಿತ್ತು. ಮೊದಲ ದೃಶ್ಯದ ಚಿತ್ರೀಕರಣದ ಬಳಿಕ, ನಾನು ಅತ್ತಿದ್ದೆ. ಅಲ್ಲಿಂದ ನಂತರ ಜೋಗಿ, ಟಗರು, ಮಫ್ತಿ, ಭಜರಂಗಿ–2 ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಒಳ್ಳೆಯ ನೆನಪುಗಳೇ ಬಹಳಷ್ಟಿದೆ’ ಎಂದರು.

‘ಒಳ್ಳೆಯ ಚಿತ್ರಗಳು ಬರುತ್ತಿವೆ’

‘ಅಪ್ಪಾಜಿ ಮುತ್ತುರಾಜ್‌ ಆಗಿ ಬಂದು ರಾಜ್‌ಕುಮಾರ್‌ ಆಗಿ ಮೆರೆದರು. ಅಪ್ಪಾಜಿಯನ್ನು ಅಷ್ಟರ ಮಟ್ಟಿಗೆ ಪ್ರೀತಿಸಲು ಅವರ ನಟನೆಯೇ ಕಾರಣ. ಯುವ ನಿರ್ದೇಶಕರು ಬಂದಾಗ, ಅವರನ್ನು ಕೇಳುವ ಗುಣ ಇರಬೇಕು. ಪ್ರತಿಭೆ ಎಲ್ಲಿ ಹೇಗೆ ಅಡಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಸ್ಟಾರ್‌ ನಿರ್ದೇಶಕನೇ ಸ್ಟಾರ್‌ ಸಿನಿಮಾ ಕೊಡಬೇಕೆಂದಿಲ್ಲ. ಕಥೆ ಇಷ್ಟವಾಗದೇ ಇದ್ದರೂ, ನನ್ನ ಮಾತುಗಳನ್ನು ಕೇಳಿಸಿಕೊಂಡರಲ್ಲವೇ ಎಂದು ಯುವ ನಿರ್ದೇಶಕನಿಗೆ ಅನಿಸಿದರೆ ಅವರು ಬೆಳೆಯಲು ಸಹಕಾರಿಯಾಗಲಿದೆ. ಹೊಸ ನಿರ್ದೇಶಕರು, ಹೊಸ ಪ್ರತಿಭೆಗಳು, ಒಳ್ಳೆಯ ಚಿತ್ರಗಳು ಬರುತ್ತಿವೆ. ಇದರಲ್ಲಿ ನಮ್ಮ ಸಿನಿಮಾಗಳೂ ಇವೆ ಎನ್ನುವುದು ಹೆಮ್ಮೆ’ ಎಂದರು.

‘ಇಂತಹ ಪಾತ್ರ ಮಾಡಿಲ್ಲ ಎನ್ನುವ ಕೊರಗು ಇಲ್ಲ. ರೌಡಿಸಂ ಆಧರಿತ ಚಿತ್ರದಲ್ಲೇ ನನ್ನನ್ನು ಜನ ನೋಡಲು ಬಯಸುತ್ತಾರೆ. ಹೀಗೆಂದು ಬರೇ ಮಚ್ಚು ಹಿಡಿದುಕೊಂಡು ಹೊರಟರೆ, ಇವನಿಗೇನು ಬೇರೆ ಕೆಲಸ ಇಲ್ವಾ ಎನ್ನುತ್ತಾರೆ. ಕೌಟುಂಬಿಕ ಚಿತ್ರಗಳು ಹಿಟ್‌ ಆಗಿವೆ. ಹಳ್ಳಿ ವಿಷಯದ ಚಿತ್ರಗಳು ಹಿಟ್‌ ಆಗಿವೆ. ಇದನ್ನು ಬಿಟ್ಟು ವಿಭಿನ್ನವಾದ ಪಾತ್ರಗಳನ್ನು ನೋಡುತ್ತಿದ್ದೇನೆ. ಇಂತಹ ಪಾತ್ರಗಳು ಬರುತ್ತಿವೆ’ ಎಂದರು.

ಹೋಂ ಪ್ರೊಡಕ್ಷನ್‌ನಲ್ಲೇ 125ನೇ ಸಿನಿಮಾ:125ನೇ ಸಿನಿಮಾವನ್ನು ಹೋಂ ಪ್ರೊಡಕ್ಷನ್‌ನಲ್ಲೇ ಮಾಡುತ್ತಿದ್ದು, ಅದು ಯಾವುದು ಎಂದು ಮಾ.11ರಂದು ಗೊತ್ತಾಗಲಿದೆ. ಆ ಚಿತ್ರಕ್ಕೆ ಗೀತಾ ನಿರ್ಮಾಪಕಿ ಎಂದು ಶಿವರಾಜ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.