
‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಿರುವ, ಪೃಥ್ವಿ ಅಂಬಾರ್ ಹಾಗೂ ಸಾಯಿಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಚೌಕಿದಾರ್’ ಚಿತ್ರ ಜ.30ರಂದು ತೆರೆಕಾಣುತ್ತಿದೆ.
ಇತ್ತೀಚೆಗೆ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ನಡೆದಿದ್ದು, ನಟ ಶಿವರಾಜ್‌ಕುಮಾರ್ ಚಿತ್ರತಂಡದ ಜೊತೆಯಾದರು. ಒಬ್ಬನೇ ಮಗನನ್ನು ಮುದ್ದಾಗಿ ಬೆಳೆಸುವ ಅಪ್ಪನ ಕಥೆ ಸಿನಿಮಾದಲ್ಲಿದ್ದು, ಸಾಯಿಕುಮಾರ್ ಹಾಗೂ ಪೃಥ್ವಿ ಅಂಬಾರ್ ತಂದೆ–ಮಗನಾಗಿ ನಟಿಸಿದ್ದಾರೆ. ಪೃಥ್ವಿಗೆ ಧನ್ಯಾ ರಾಮ್ಕುಮಾರ್ ಜೋಡಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ‘ಶಿಕ್ಷಣ ಕ್ಷೇತ್ರದಲ್ಲಿರುವವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾವೂ ಒಂದು ಶಿಕ್ಷಣ ಇದ್ದಂತೆ. ನಾನು ಚಂದ್ರಶೇಖರ್ ಬಂಡಿಯಪ್ಪ ಜೊತೆ ಎರಡು ಸಿನಿಮಾ ಮಾಡಬೇಕಿತ್ತು. ಆದರೆ ಅದು ಟೇಕ್‌ಆಫ್ ಆಗಲಿಲ್ಲ. ಭಾವನಾತ್ಮಕ ಕಥೆಯಲ್ಲಿ ಅವರದ್ದು ಎತ್ತಿದ ಕೈ. ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ. ಸಾಯಿಕುಮಾರ್ ಅವರು ಸ್ನೇಹಿತ ಎನ್ನುವುದಕ್ಕಿಂತ ನಮ್ಮ ಕುಟುಂಬದ ಸದಸ್ಯ. ಚಿತ್ರರಂಗದಲ್ಲಿ ಹೊಸಬರು ಬೆಳೆಯಬೇಕು. ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷವಾಯಿತು. ಹೊಸಬರಿಗೆ ಸ್ಫೂರ್ತಿಯಾಗಲಿ ಎಂದು ನಾವಿನ್ನಿದ್ದೇವಷ್ಟೆ. ಹೊಸಬರೇ ಇನ್ನು ಚಿತ್ರರಂಗವನ್ನು ಮುನ್ನಡೆಸಬೇಕು. ಧನ್ಯಾಳನ್ನು ಚಿಕ್ಕವಳಾಗಿದ್ದಾಗಲಿಂದ ನೋಡಿಕೊಂಡು ಬಂದಿದ್ದೇನೆ. ಈಗಿನ ಜೆನ್‌ಜಿ ಪೀಳಿಗೆ ಗ್ಲ್ಯಾಮರ್ ರೋಲ್‌ಗಳತ್ತ ವಾಲುತ್ತಿರುವಾಗ ಧನ್ಯಾ ಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾಳೆ. ಎಲ್ಲವೂ ತಾತನ ಆಶೀರ್ವಾದದಂತೆ ಕಾಣುತ್ತದೆ’ ಎಂದರು.
‘ನಾನು ಅಮ್ಮನ ಗರ್ಭದಲ್ಲಿರುವಾಗಲೇ ಚಿತ್ರರಂಗದ ನಂಟು ಬೆಳೆಯಿತು ಎನ್ನಬಹುದು. ಅಮ್ಮ–ಅಪ್ಪ ಇಬ್ಬರೂ ಕಲಾವಿದರು. ಅಮ್ಮ ರಾಜ್‌ಕುಮಾರ್ ಅವರ ಜೊತೆಯೂ ನಟಿಸಿದ್ದರು. ಅಪ್ಪ ರಾಜ್‌ಕುಮಾರ್ ಅವರಿಗೆ ತೆಲುಗಿನಲ್ಲಿ ಡಬ್ಬಿಂಗ್ ಮಾಡಿದ್ದರು. ನಾನು ಇಲ್ಲಿಯವರೆಗೂ ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಡಬ್ ಮಾಡಿದ್ದೇನೆ. ಇದಕ್ಕೆ ‘ಬಬ್ರುವಾಹನ’ ಸಿನಿಮಾವೇ ಸ್ಫೂರ್ತಿ. ನಾನು, ರವಿಶಂಕರ್ ಹಾಗೂ ಅಯ್ಯಪ್ಪ ಇರುವುದಕ್ಕೆ ಕರ್ನಾಟಕವೇ ಕಾರಣ. ನಾನು ಶಿವರಾಜ್‌ಕುಮಾರ್ ಅವರು ‘ಮುದ್ದಿನ ಕಣ್ಮಣಿ’, ‘ಎಕೆ 47’ನಲ್ಲಿ ನಟಿಸಿದ್ದೆವು. ‘ಎಕೆ 47’ನಲ್ಲಿ ಒಂದು ಸಾಹಸ ದೃಶ್ಯಕ್ಕೆ ಶಿವರಾಜ್‌ಕುಮಾರ್ ಅವರು ನನಗೆ ಡ್ಯೂಪ್ ಆಗಿದ್ದರು. ಇದೀಗ ‘ಬೇಲ್’ ಎನ್ನುವ ಸಿನಿಮಾದಲ್ಲಿ ಅವರ ಜೊತೆ ನಟಿಸುತ್ತಿದ್ದೇನೆ. ಶಿವಣ್ಣ ಅವರ ಎನರ್ಜಿಗೆ ಸಾಟಿ ಇಲ್ಲ. ಎಲ್ಲರ ಯಶಸ್ಸನ್ನು ಬಯಸುವವರು ಶಿವರಾಜ್‌ಕುಮಾರ್. ನನಗೆ ರಾಜ್‌ಕುಮಾರ್ ಅವರ ಜೊತೆ ನಟಿಸುವ ಅವಕಾಶ ಸಿಗಲಿಲ್ಲ. ಆದರೆ ಅವರ ಮಕ್ಕಳು, ಮೊಮ್ಮಕ್ಕಳ ಜೊತೆ ನಟಿಸುತ್ತಿದ್ದೇನೆ’ ಎಂದರು ಸಾಯಿಕುಮಾರ್.
‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ವಿಎಸ್ ಎಂಟರ್‌ಟೇನ್ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.