ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕಥೆಯೇ ಸಿನಿಮಾವನ್ನು ಗೆಲ್ಲಿಸಲಿದೆ ಎಂದಿದ್ದಾರೆ ಶಿವರಾಜ್‌ಕುಮಾರ್.
‘ಮಾಡುವ ಉದ್ಯೋಗದಲ್ಲೂ ಬದ್ಧತೆ ಎನ್ನುವುದು ಮುಖ್ಯ. ಕುಟುಂಬಕ್ಕೆ ನೀಡುವ ಆದ್ಯತೆಯನ್ನು ನಾವು ಇರುವ ಉದ್ಯೋಗಕ್ಕೂ ನೀಡುವುದು ಮುಖ್ಯ. ನನಗೆ ಭಯ ಇದ್ದೇ ಇತ್ತು. ಏನೇ ಆಗಲಿ ಈ ಸಿನಿಮಾ ಮುಗಿಸಿಕೊಂಡೇ ಶಸ್ತ್ರಚಿಕಿತ್ಸೆಗೆ ಹೋಗಬೇಕು ಎಂದು ನಿರ್ಧರಿಸಿದ್ದೆ. ಹೀಗಾಗಿ ಡಬ್ಬಿಂಗ್ ಕೂಡಾ ಪೂರ್ಣಗೊಳಿಸಿದ್ದೆ. ಡಿ.ಕೆ.ಡಿ ರಿಯಾಲಿಟಿ ಶೋ ಮಾಡುತ್ತಿದ್ದ ಸಮಯದಲ್ಲಿ ಅರ್ಜುನ್ ಜನ್ಯ ನಾಲ್ಕೈದು ನಿಮಿಷಗಳಲ್ಲಿ ಈ ಚಿತ್ರದ ಕಥೆ ಹೇಳಿದರು. ಕಥೆ ಕೇಳಿ ಥ್ರಿಲ್ ಆಗಿದ್ದೆ. ಕಥೆ ಕೊಟ್ಟು ಬಿಡುತ್ತೇನೆ ಯಾರಾದರೂ ನಿರ್ದೇಶನ ಮಾಡಲಿ ಎಂದು ಅರ್ಜುನ್ ಜನ್ಯ ಹೇಳಿದರು. ನೀವು ಕಥೆ ಚೆನ್ನಾಗಿ ಹೇಳಿದ್ದೀರಿ. ನೀವೇ ನಿರ್ದೇಶನ ಮಾಡಿ ಎಂದಿದ್ದೆ. ನಂತರ ನಿರ್ಮಾಣಕ್ಕೆ ರಮೇಶ್ ರೆಡ್ಡಿ ಮುಂದಾದರು. ಈ ಚಿತ್ರವನ್ನು ಬೇರೆಯವರು ನಿರ್ದೇಶನ ಮಾಡಿದ್ದರೆ ಕನ್ನಡಕ್ಕೆ ಸಿಗುತ್ತಿದ್ದ ಒಳ್ಳೆಯ ನಿರ್ದೇಶಕನೊಬ್ಬನನ್ನು ಕಳೆದುಕೊಳ್ಳುತ್ತಿದ್ದೆವು. ‘ಪ್ರೀತ್ಸೆ’, ‘ಲವ ಕುಶ’ ಚಿತ್ರಗಳಲ್ಲಿ ಉಪೇಂದ್ರ ಜೊತೆ ನಟಿಸಿದ್ದೆ. ಈಗ ಮತ್ತೆ ಅವರೊಂದಿಗೆ ಅಭಿನಯಿಸಿದ್ದೇನೆ. ರಾಜ್ ಬಿ. ಶೆಟ್ಟಿ ಅವರ ಜೊತೆಗೆ ಇದು ಮೊದಲ ಚಿತ್ರ. ಟೀಸರ್‌ನಲ್ಲೇ ಅರ್ಜುನ್ ಜನ್ಯ ಕುತೂಹಲ ಮೂಡಿಸಿದ್ದಾರೆ. ಈ ಚಿತ್ರದ ಕಥೆ ಬಹಳ ವಿಭಿನ್ನವಾಗಿದೆ’ ಎಂದರು ಶಿವರಾಜ್‌ಕುಮಾರ್.
‘45’ ಎನ್ನುವ ಶೀರ್ಷಿಕೆಗೆ ಅರ್ಥವಿದೆ. ಟೀಸರ್‌ನಲ್ಲೇ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಅದನ್ನು ಪ್ರೇಕ್ಷಕರು ಸೂಕ್ಷ್ಮವಾಗಿ ಗಮನಿಸಬೇಕು. ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚಿಗೆ ಇದ್ದು ಕೆನಡಾದಲ್ಲಿ ಪರಿಣಿತ ತಂತ್ರಜ್ಞರ ತಂಡ ಈ ಕೆಲಸ ಮಾಡುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಮತ್ತೊಂದು ಟೀಸರ್, ಹಾಡುಗಳು ಹಾಗೂ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾರೆ ಅರ್ಜುನ್ ಜನ್ಯ.
‘ಅರ್ಜುನ್ ಜನ್ಯ ಅವರಲ್ಲಿ ಒಬ್ಬ ಶ್ರೇಷ್ಠ ನಿರ್ದೇಶಕನನ್ನು ನಾನು ಕಂಡಿದ್ದೇನೆ. ಅವರಿಗೆ ಸಿನಿಮಾ ಮೇಲೆ ಹುಚ್ಚು ಬಹಳಷ್ಟಿದೆ’–ರಾಜ್ ಬಿ.ಶೆಟ್ಟಿ ನಟ
‘ನಮ್ಮೊಳಗಿನ ನಿರ್ದೇಶಕನನ್ನು ಗುರುತಿಸಿದವರು ಶಿವರಾಜ್‌ಕುಮಾರ್. ಶಿವಣ್ಣ ಓರ್ವ ಅಪರಂಜಿ. ಅವರಿಂದ ಸಿಗುವ ಪ್ರೋತ್ಸಾಹ ಬಹಳ ಅದ್ಭುತ’–ಉಪೇಂದ್ರ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.