ADVERTISEMENT

ಈ ಪಯಣ ‘ಆನಂದವೇದ’!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 19:30 IST
Last Updated 22 ಡಿಸೆಂಬರ್ 2022, 19:30 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

‘1ರಿಂದ 125ನೇ ಸಿನಿಮಾದವರೆಗೆ ಬೆಳೆಸಿದ್ದೀರಿ...ಬೆಳೆಸುತ್ತಿದ್ದೀರಿ. ಈ 125, 225 ಆಗಲಿ; 325 ಆಗಲಿ...ಯಾಕೆ ಸಾವಿರವೇ ಆಗಲಿ..ಆ ಶಕ್ತಿಯನ್ನು ದೇವರು ನನಗೆ ಕೊಡಲಿ...’

ಇತ್ತೀಚೆಗೆ ತಮ್ಮ 125ನೇ ಸಿನಿಮಾ ‘ವೇದ’ದ ಸುದ್ದಿಗೋಷ್ಠಿಯಲ್ಲಿ ಹೀಗೆನ್ನುವಾಗ 60ರ ವಯಸ್ಸಿನ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಧ್ವನಿಯಲ್ಲಿ ‘ಆನಂದ್‌’ನ ಹುರುಪೇ ಇತ್ತು. 1986..ಶಿವರಾಜ್‌ಕುಮಾರ್‌ ಅವರು ನಾಯಕನಾಗಿ ತೆರೆ ಮೇಲೆ ಹೆಜ್ಜೆ ಇಟ್ಟ ವರ್ಷ. ‘ಆನಂದ್‌’ ಯಶಸ್ಸಿನ ಬೆನ್ನಲ್ಲೇ ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’ ಚಿತ್ರಗಳೂ ಹಿಟ್‌ ಆಗಿ ‘ಹ್ಯಾಟ್ರಿಕ್‌ ಹೀರೊ’ ಆದ ಚಂದನವನದ ‘ಶಿವಣ್ಣ’, ಮೊದಲ ಸಿನಿಮಾ ಬಿಡುಗಡೆ ವೇಳೆ ಇದ್ದ ಭಯವನ್ನೇ ಈಗಲೂ ಹೊಂದಿದ್ದಾರಂತೆ!

‘ಮುಂದಿನ ಫೆಬ್ರುವರಿ ಬಂದರೆ ನನ್ನ ಸಿನಿಪಯಣದ 37ನೇ ವರ್ಷ. ಇಷ್ಟು ವರ್ಷದ ಅನುಭವವಿದ್ದರೂ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಭಯ ಇದ್ದೇ ಇದೆ. ಏಕೆಂದರೆ ಪ್ರತೀ ಸಿನಿಮಾವೂ ಒಂದು ಪರೀಕ್ಷೆಯಂತೆ. ಅದರಲ್ಲೂ ‘ವೇದ’ ನಮ್ಮ ಹೋಂ ಪ್ರೊಡಕ್ಷನ್‌ನ ಮೊದಲ ಸಿನಿಮಾ’ ಎನ್ನುತ್ತಾರೆ ಶಿವರಾಜ್‌ಕುಮಾರ್‌.

ADVERTISEMENT

ಈ ಪಯಣ ‘ಆನಂದವೇದ’: ‘ನನ್ನ ಈ ಸಿನಿಪಯಣದಲ್ಲಿ ಅಪ್ಪಾಜಿ, ಅಮ್ಮ, ವರದಣ್ಣ, ಚಿ.ಉದಯ್‌ಶಂಕರ್‌, ಸಿಂಗೀತಂ ಶ್ರೀನಿವಾಸರಾವ್‌ ಮುಂತಾದವರು ನಮ್ಮನ್ನು ಬೆಳೆಸಿ ದಾರಿತೋರಿಸಿದರೆ ಸಾಕಷ್ಟು ನಿರ್ದೇಶಕರು, ಛಾಯಾಗ್ರಾಹಕರು, ನೃತ್ಯ ನಿರ್ದೇಶಕರು ಈ ದಾರಿಯಲ್ಲಿ ಕೈಹಿಡಿದಿದ್ದಾರೆ. ನನ್ನ ಮೊದಲನೇ ಸಿನಿಮಾ ‘ಆನಂದ್‌’ ಅನ್ನು ಅಮ್ಮ ಪಾರ್ವತಮ್ಮ ರಾಜ್‌ಕುಮಾರ್‌ ಅವರು ನಿರ್ಮಾಣ ಮಾಡಿದ್ದರು. 125ನೇ ಸಿನಿಮಾ ‘ವೇದ’ವನ್ನು ಪತ್ನಿ ಗೀತಾ ನಿರ್ಮಾಣ ಮಾಡಿದ್ದಾರೆ. ನನ್ನ ತಾಯಿ ಹಾಗೂ ಪತ್ನಿ ನನ್ನೆರಡು ಕಣ್ಣಿದ್ದಂತೆ. ಆನಂದ್‌ ಸಿನಿಮಾದಿಂದ ವೇದ ಸಿನಿಮಾದವರೆಗೂ ನನ್ನ ಸಿನಿಪಯಣ ‘ಆನಂದವೇದ’ವಾಗಿದೆ ಎಂದು ಭಾವಿಸುತ್ತೇನೆ’ ಎನ್ನುತ್ತಾ ಕ್ಷಣಕಾಲ ಹಳೆನೆನಪುಗಳತ್ತ ಹೆಜ್ಜೆಹಾಕುತ್ತಾರೆ.

ಗೀತಾಳಲ್ಲಿ ಅಮ್ಮನ ಗುಣ: ‘ವೇದ ಸಿನಿಮಾವನ್ನು ಬೇರೊಬ್ಬರು ನಿರ್ಮಾಣ ಮಾಡಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ಅವರಿಗೂ ಮಾಡಲು ಸಾಧ್ಯವಾಗಲಿಲ್ಲ. ಹೀಗಿರುವ ಸಂದರ್ಭದಲ್ಲಿ ಈ ಚಿತ್ರವನ್ನು ನಮ್ಮದೇ ಬ್ಯಾನರ್‌ನಡಿ ಮಾಡಲು ನಿರ್ಧರಿಸಿದೆವು. ಗೀತಾಳಿಗೆ ಅಮ್ಮನ ಗುಣಗಳೇ ಇವೆ. ಅದು ಊಟದ ವಿಷಯದಲ್ಲೇ ಆಗಿರಲಿ ಅಥವಾ ಸಂಭಾವನೆ ವಿಚಾರದಲ್ಲೇ ಆಗಿರಲಿ, ಎಂದಿಗೂ ಯಾರಿಗೂ ಕಮ್ಮಿ ಮಾಡಿಲ್ಲ. ಇದನ್ನು ಹೇಳಲು ಹೆಮ್ಮೆ ಪಡುತ್ತೇನೆ. ಪ್ರತಿಯೊಬ್ಬರೂ ನನಗಿಂತಲೂ ಹೆಚ್ಚಾಗಿ ಗೀತಾಳನ್ನು ಇಷ್ಟಪಡುತ್ತಿದ್ದಾರೆ. ಗೀತಾ ಪಿಕ್ಚರ್ಸ್‌ನಡಿ ಕೇವಲ ನನ್ನ ಸಿನಿಮಾಗಳಷ್ಟೇ ಅಲ್ಲ, ಒಳ್ಳೆಯ ಕಥಾಹಂದರದ, ಕಂಟೆಂಟ್‌ ಇರುವ ಸಿನಿಮಾಗಳನ್ನು ಖಂಡಿತವಾಗಿಯೂ ಮಾಡುತ್ತೇವೆ. ಹೋಂ ಬ್ಯಾನರ್‌ನಡಿ ಒಂದು ವೆಬ್‌ಸಿರೀಸ್‌ ಕೂಡಾ ನಿರ್ಮಾಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಿವರಾಜ್‌ಕುಮಾರ್‌.

ಯಾರೀ ವೇದ?: ‘ವೇದ ಎನ್ನುವುದು ಹೆಸರಷ್ಟೇ. ಆತನ ಬಾಳು ಒಂದು ಗ್ರಂಥದ ರೀತಿಯೇ. ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ಬಾಳು, ಸಂತೋಷ, ನಂಬಿಕೆ ಇರುತ್ತದೆ. ಇವುಗಳು ‘ವೇದ’ ಎಂಬ ಆ ಪಾತ್ರದ ಜೀವನದಲ್ಲಿ ಎಷ್ಟು ಆಟವಾಡುತ್ತವೆ ಎನ್ನುವುದೇ ಕಥಾಹಂದರ. ವೇದ ಎನ್ನುವ ಬೆಂಕಿಯ ಹಿಂದೆ ಒಂದು ಹೂವಿನ ಮನಸ್ಸಿದೆ’ ಎನ್ನುತ್ತಾರೆ ಸೆಂಚುರಿ ಸ್ಟಾರ್‌.

‘ವೇದ’ ಇಂದು ತೆರೆಗೆ

ಗೀತಾ ಶಿವರಾಜ್‌ಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಿಸಿರುವ, ಎ.ಹರ್ಷ ನಿರ್ದೇಶನದ, ನಟ ಶಿವರಾಜಕುಮಾರ್ ಅವರ 125ನೇ ಸಿನಿಮಾ ‘ವೇದ’ ಇಂದು(ಡಿ.23) ರಾಜ್ಯದ 304 ಚಿತ್ರಮಂದಿರಗಳ 1,216ಕ್ಕೂ ಅಧಿಕ ಪರದೆಗಳಲ್ಲಿ ಚಿತ್ರಪ್ರದರ್ಶನವಾಗಲಿದೆ. ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಶಿವರಾಜ್‌ಕುಮಾರ್‌ ಅವರು ತಮ್ಮ ಪಾತ್ರಕ್ಕೆ ತಮಿಳಲ್ಲೂ ಡಬ್‌ ಮಾಡಿದ್ದಾರೆ.

‘ನೂರನೇ ಸಿನಿಮಾ ಮಾಡಬೇಕಿತ್ತು’

‘ಶಿವರಾಜ್‌ಕುಮಾರ್‌ ಅವರ ನೂರನೇ ಚಿತ್ರವನ್ನು ನಮ್ಮ ಗೀತಾ ಪಿಕ್ಚರ್ಸ್‌ ಲಾಂಛನದಡಿ ನಿರ್ಮಾಣ ಮಾಡಲು ನಿರ್ಧರಿಸಿದ್ದೆವು. ಆದರೆ ಆ ಸಿನಿಮಾವನ್ನು ಪ್ರೇಮ್‌ ಹಾಗೂ ರಕ್ಷಿತಾ ಅವರು ನಿರ್ಮಾಣ ಮಾಡುತ್ತೇವೆ ಎಂದು ಕೇಳಿಕೊಂಡ ಕಾರಣ ಬಿಟ್ಟುಕೊಟ್ಟೆವು. ಇದಾದ ಬಳಿಕ 125ನೇ ಸಿನಿಮಾಗಾಗಿ ಕಾದೆವು’ ಎಂದು ವಿವರಿಸುತ್ತಾರೆ ಗೀತಾ ಶಿವರಾಜ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.