ADVERTISEMENT

ಸರ್ಕಾರದ ನೆರವಿಗೆ ಮೊರೆ ಇಟ್ಟ ‘ಶಿವಾರ್ಜುನ’ ನಿರ್ಮಾಪಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 6:10 IST
Last Updated 3 ಆಗಸ್ಟ್ 2020, 6:10 IST
ಶಿವಾರ್ಜುನ ಚಿತ್ರದಲ್ಲಿ ಅಕ್ಷತಾ ಮತ್ತು ಚಿರಂಜೀವಿ ಸರ್ಜಾ
ಶಿವಾರ್ಜುನ ಚಿತ್ರದಲ್ಲಿ ಅಕ್ಷತಾ ಮತ್ತು ಚಿರಂಜೀವಿ ಸರ್ಜಾ   

‘ಕೊರೊನಾ ಮಹಾಮಾರಿ ನಮ್ಮ ಇಡೀ ವ್ಯವಹಾರವನ್ನೇ ಬುಡಮೇಲು ಮಾಡಿಬಿಟ್ಟಿದೆ. ನಮ್ಮ ಸಿನಿಮಾ ‘ಶಿವಾರ್ಜುನ’ ಬಿಡುಗಡೆಯಾದ ಬೆನ್ನಲ್ಲೇ ಚಿತ್ರಮಂದಿರಗಳು ಬಂದ್‌ ಆಗಿ, ಲಾಕ್‌ಡೌನ್‌ ಘೋಷಣೆಯಾಯಿತು. ಇದರಿಂದ ಮತ್ತಷ್ಟು ನಷ್ಟಕ್ಕೆ ಸಿಲುಕಿದೆವು. ಈಗ ಸರ್ಕಾರವೇ ನಮ್ಮ ನೆರವಿಗೆ ಬರಬೇಕು’ ಎಂದು ಚಿತ್ರದನಿರ್ಮಾಪಕ ಶಿವಾರ್ಜುನ ಮೊರೆ ಇಟ್ಟಿದ್ದಾರೆ.

ಇತ್ತೀಚೆಗೆ ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ಶಿವಾರ್ಜುನ’ ಸಿನಿಮಾ ಮಾರ್ಚ್‌ 12ರಂದು ತೆರೆಕಂಡಿತ್ತು. ಪೂರ್ಣ ಪ್ರಮಾಣದಲ್ಲಿ ಚಿತ್ರ ಪ್ರದರ್ಶನ ಕಂಡಿದ್ದು ಒಂದೇ ದಿನ ಮಾತ್ರ. ‘ಕೊರೊನಾ ಹರಡುತ್ತಿದ್ದರಿಂದ ಮಾರ್ಚ್14ರಿಂದಲೇ ಚಿತ್ರಮಂದಿರಗಳು ಬಂದ್‌ ಆದವು. ಮಾ.24ರಿಂದಲಾಕ್‌ಡೌನ್‌ ಘೋಷಣೆಯಾಯಿತು.

ಕನಿಷ್ಠ ಹತ್ತು ದಿನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದರೂ ನಾವು ಹೂಡಿದ್ದ ಬಂಡವಾಳ ವಾಪಸ್‌ ಬರುತ್ತಿತ್ತು.ಚಿತ್ರಕ್ಕೆ ನಾವು ಹಾಕಿರುವ ಬಂಡವಾಳ ಮತ್ತು ಬಡ್ಡಿ ಸೇರಿ ನಾಲ್ಕೂವರೆ ಕೋಟಿ ದಾಟುತ್ತದೆ. ನಮಗಾಗಿರುವ ನಷ್ಟವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಗಮನಕ್ಕೆ ತಂದರೂಯಾವುದೇ ಪ್ರಯೋಜನವಾಗಿಲ್ಲ. ಮೂರೂವರೆ ದಶಕಗಳಿಂದ ಚಿತ್ರರಂಗದಲ್ಲಿ ನಿರ್ಮಾಣ ವಿಭಾಗದಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದರೂ ಚಿತ್ರರಂಗದ ಪ್ರಮುಖರು ನಮ್ಮ ನೆರವಿಗೆ ನಿಲ್ಲುತ್ತಿಲ್ಲ ’ ಎಂದು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಕಲೆಯ ಮೇಲಿನ ಅಭಿಮಾನ ಮತ್ತು ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳುವಆಸೆ ಇಟ್ಟುಕೊಂಡು ಕೋಟಿ ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ದೆವು. ಕೊರೊನಾ ನೀಡಿದ ಪೆಟ್ಟಿನ ಬೆನಲ್ಲೇ ನಮ್ಮ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಅಕಾಲಿಕ ಸಾವಿಗೀಡಾಗಿದ್ದು ಕೂಡ ಮತ್ತಷ್ಟು ತುಂಬಲಾರದ ನಷ್ಟ ಉಂಟು ಮಾಡಿದೆ.ಚಿತ್ರರಂಗದ ಪ್ರಮುಖರಿಗೆ ನಮ್ಮ ಸಮಸ್ಯೆಗಳು ಕಾಣಿಸುತ್ತಿಲ್ಲ. ಚಿತ್ರ ಪ್ರದರ್ಶನ ತಕ್ಷಣ ರದ್ದಾಗಿರುವುದರಿಂದ ಸರ್ಕಾರ ನಮಗೆ ಧನಸಹಾಯ ನೀಡಬೇಕು.ನಾವು ಸರ್ಕಾರಕ್ಕೆ ಪಾವತಿಸಿರುವ ಜಿಎಸ್‌ಟಿ, ವಾರ್ತಾ ಇಲಾಖೆಯ ಶುಲ್ಕ ಮತ್ತು ಸೆನ್ಸಾರ್‌ ಮಂಡಳಿಗೆ ಪಾವತಿಸಿರುವ ಶುಲ್ಕವನ್ನು ವಾಪಸ್‌ ಕೊಡಬೇಕು. ಚಿತ್ರಕ್ಕೆ ನೀಡುವ ಸಬ್ಸಿಡಿ ಮೊತ್ತವನ್ನು ದ್ವಿಗುಣಗೊಳಿಸಬೇಕು’ ಎಂದು ಅವರು ರಾಜ್ಯ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

‘ಶಿವರಾಜ್‌ ಕುಮಾರ್‌ ಅವರು ಈಗ ಚಿತ್ರರಂಗದ ನಾಯಕತ್ವ ವಹಿಸಿರುವುದರಿಂದ ನಮಗೆ ನೆರವು ಕೊಡಿಸುವಆಶಾಭಾವನೆ ಮೂಡಿದೆ. ಮುಖ್ಯಮಂತ್ರಿ ಬಳಿಗೆ ಚಿತ್ರರಂಗದವರ ನಿಯೋಗ ಕೊಂಡೊಯ್ಯುವಾಗ ನಮ್ಮ ಬೇಡಿಕೆಗಳನ್ನು ಶಿವಣ್ಣ ಸರ್ಕಾರದ ಮುಂದಿಡುವ ವಿಶ್ವಾಸವಿದೆ. ಹಾಗೆಯೇ ಪ್ರದರ್ಶನ ರದ್ದಾಗಿರುವ ಚಿತ್ರಗಳ ಮರು ಬಿಡುಗಡೆಗೆ ಅವಕಾಶ ಕೊಡುವಾಗ ನಮ್ಮ ಚಿತ್ರಕ್ಕೆ ಮೊದಲ ಆದ್ಯತೆ ಕೊಡಿಸಬೇಕು’ ಎಂದು ಶಿವಾರ್ಜುನ ಮನವಿ ಮಾಡಿದ್ದಾರೆ.

ಈ ಚಿತ್ರಕ್ಕೆ ಶಿವತೇಜಸ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದು, ಅವರ ಪುತ್ರ ಸುರಾಗ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದರು.

ಚಿರಂಜೀವಿ ಸರ್ಜಾ ಎದುರು ನಾಯಕಿಯಾಗಿ ಅಮೃತಾ ಅಯ್ಯಂಗಾರ್‌, ಸಹ ನಾಯಕಿಯರಾಗಿಅಕ್ಷತಾ ಶ್ರೀನಿವಾಸ್, ಅಕ್ಷಿತಾ ನಟಿಸಿದ್ದರು. ಈ ಚಿತ್ರದಲ್ಲಿ ಕಿಶೋರ್, ಸಾಧು ಕೋಕಿಲ, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರ ಬಹುತಾರಾಗಣವಿದೆ. ಛಾಯಾಗ್ರಹಣ ಎಚ್‌.ಸಿ. ವೇಣು,ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ರವಿವರ್ಮ, ವಿನೋದ್, ನೃತ್ಯ ಮುರಳಿ, ಗೀತ ಸಾಹಿತ್ಯ ಯೋಗರಾಜ್ ಭಟ್, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.