ADVERTISEMENT

ಜನ್ಮದಿನಕ್ಕೆ ಸಾಮಾಜಿಕ ಜಾಲತಾಣದ ಮುಖಾಂತರವೇ ಶುಭಹಾರೈಸಿ: ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:37 IST
Last Updated 7 ಜುಲೈ 2021, 9:37 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದರೂ, ನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಈ ಸಂದರ್ಭದಲ್ಲಿ ನಟರಾದ ಗಣೇಶ್‌, ಪ್ರಜ್ವಲ್‌ ದೇವರಾಜ್‌ ಸೇರಿದಂತೆ ಹಲವು ಸೆಲಿಬ್ರಿಟಿಗಳು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು.

ಇದೀಗ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರೂ ತಮ್ಮ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳೆಲ್ಲರೂ ಮನೆ ಎದುರು ಜಮಾಯಿಸದೆ ಅಥವಾ ಸಾವರ್ಜಜನಿಕವಾಗಿ ಜನ್ಮದಿನ ಆಚರಿಸದೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಷ್ಟೇ ತಮಗೆ ಶುಭಕೋರಿ ಎಂದು ವಿಡಿಯೊ ಮುಖಾಂತರ ಕೋರಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿರುವ ಶಿವರಾಜ್‌ಕುಮಾರ್‌, ‘ನನ್ನ ಜನ್ಮದಿನಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಜನ್ಮದಿನ. ಇದು ಎಲ್ಲರಿಗೂ ತಿಳಿದಿದೆ. ಆ ದಿನ ಕೆಲವು ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಸರವಿದೆಯೋ ಅಷ್ಟೇ ಬೇಸರ ನನಗಿದೆ. ನಿಮ್ಮ ಶುಭಹಾರೈಕೆಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರವೇ ತಿಳಿಸಿ. ನಿಮ್ಮ ಶುಭಹಾರೈಕೆ, ಪ್ರೋತ್ಸಾಹ, ಪ್ರೀತಿ ನನ್ನ ಮೇಲೆ ಯಾವಗಲೂ ಇರಲಿ ಎಂದು ಬಯಸುತ್ತೇನೆ. ಅತಿ ಮುಖ್ಯವಾದ ವಿಷಯ ಏನೆಂದರೆ ದಯವಿಟ್ಟು ಕೋವಿಡ್‌ ನಿಯಮಗಳನ್ನು ಪಾಲಿಸಿ. ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ ಹಾಗೂ ಲಸಿಕೆ ಹಾಕಿಸಿಕೊಳ್ಳಿ. ಆದಷ್ಟು ಬೇಗ ಕೊರೊನಾ ಕಡಿಮೆಯಾಗಲಿ. ನಾವೆಲ್ಲರೂ ಜೊತೆಸೇರೋಣ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.