ADVERTISEMENT

ಪ್ರತಿಭೆಗೆ ಮನ್ನಣೆ: ಶ್ರದ್ಧಾ ಹರ್ಷ

ಮಂಜುಶ್ರೀ ಎಂ.ಕಡಕೋಳ
Published 14 ಮಾರ್ಚ್ 2019, 19:31 IST
Last Updated 14 ಮಾರ್ಚ್ 2019, 19:31 IST
ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್   

ಗುಲಾಬಿ ಬಣ್ಣದ ಕೋಟ್, ಪ್ಯಾಂಟ್ ಧರಿಸಿ, ಕೂದಲನ್ನು ಎತ್ತಿ ಕಟ್ಟಿದ್ದ ನಟಿ ಶ್ರದ್ದಾ ಶ್ರೀನಾಥ್ ಸರಳತೆಯೇ ಸೌಂದರ್ಯ ಎನ್ನುವ ಮಾತಿಗೆ ಪ್ರತೀಕದಂತೆ ಕಾಣುತ್ತಿದ್ದರು. ಬಾಲಿವುಡ್ ತಾರೆಯರು ಬಳಸುವ ‘ಬಿ–ಬ್ಲಂಟ್’ ಹೇರ್‌ಕೇರ್ ಉತ್ಪನ್ನ ಗ್ರಾಹಕರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಶ್ರದ್ಧಾ, ತಮ್ಮ ಸಿನಿಪಯಣದ ಬಗ್ಗೆ ‘ಮೆಟ್ರೊ’ ಜತೆಗೆ ಆಡಿದ ಮಾತುಕತೆ ಇಲ್ಲಿದೆ

* ಹಿಂದಿಯ ‘ಮಿಲನ್ ಟಾಕೀಸ್‌’ಗೆ ಆಯ್ಕೆಯಾಗಿದ್ದು ಹೇಗೆ?

ದಕ್ಷಿಣ ಭಾರತೀಯ ಸಿನಿಮಾಗಳು ಈಗ ಬಾಲಿವುಡ್‌ಗೂ ತಲುಪುತ್ತಿವೆ. ತಮಿಳಿನಲ್ಲಿ ನಾನು ಮಾಡಿದ ‘ವಿಕ್ರಂವೇದ’ ಸಿನಿಮಾ ನೋಡಿ, ಬಾಲಿವುಡ್‌ನ ಬರಹಗಾರರೊಬ್ಬರು ನನ್ನನ್ನು ‘ಮಿಲನ್ ಟಾಕೀಸ್’ ನಿರ್ದೇಶಕ ಟಿಗ್ಮಾಂಶು ಧೂಲಿಯಾ ಅವರಿಗೆ ಶಿಫಾರಸು ಮಾಡಿದರು. ಅವರು ‘ವಿಕ್ರಂವೇದ’ ದ ಟ್ರೈಲರ್ ನೋಡಿ, ನನ್ನನ್ನು ಆಡಿಷನ್‌ಗೆ ಕರೆದರು. ಅಲ್ಲಿ ಓಕೆ ಅನಿಸಿದ್ಮೇಲೆ ನನ್ನನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದರು.

ADVERTISEMENT

* ಬಾಲಿವುಡ್‌ಗೆ ಹೋಗಬೇಕೆನ್ನುವ ಕನಸಿತ್ತೇ?

ಕನಸು ಅಥವಾ ಪ್ಲಾನಿಂಗ್ ಅಂತ ಏನೂ ಇರಲಿಲ್ಲ. ಆದರೆ, ಅವಕಾಶ ಸಿಕ್ಕರೆ ಅಭಿನಯಿಸಬೇಕೆಂಬ ಆಸೆಯಂತೂ ಇತ್ತು. ನನ್ನ ಜೀವನದಲ್ಲಿ ನಾನಂತೂ ಯಾವತ್ತೂ ಏನೂ ಪ್ಲಾನ್ ಮಾಡಿದವಳೇ ಅಲ್ಲ. ಮೊದಲು ಕನ್ನಡ, ತಮಿಳು ಈಗ ಹಿಂದಿ ಸಿನಿಮಾ. ಇದು ನನ್ನ ಅದೃಷ್ಟ ಅನಿಸುತ್ತೆ. ನನಗೂ ನನ್ನ ಕುಟುಂಬಕ್ಕೆ ಯಾವುದೇ ರೀತಿಯ ಸಿನಿಮಾ ಹಿನ್ನೆಲೆ ಇಲ್ಲ. ಪ್ರತಿಭೆಯನ್ನು ಗುರುತಿಸಿ ನನ್ನನ್ನು ಬಾಲಿವುಡ್ ಕರೆಸಿತು.

* ಮಾಧವನ್ ಜತೆಗೆ ಮತ್ತೊಂದು ಸಿನಿಮಾದಲ್ಲಿ ನಾಯಕಿಯಾಗಿದ್ದೀರಿ...

ಹಹಹ್ಹ (ನಗು). ಮೊದಮೊದಲು ಮಾಧವನ್ ಜತೆ ಅಭಿನಯಿಸಲು ನರ್ವಸ್ ಆಗುತ್ತಿತ್ತು. ಈಗ ಮಾಧವನ್ ನನ್ನ ಫ್ರೆಂಡ್ ಆಗಿಬಿಟ್ಟಿದ್ದಾರೆ. ‘ವಿಕ್ರಂವೇದ’ದಲ್ಲಿ ನಮ್ಮ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಬಹುಶಃ ಪ್ರೇಕ್ಷಕರು ಮತ್ತೊಮ್ಮೆ ಜೋಡಿಯಾಗಿ ನೋಡಲು ಬಯಸುತ್ತಿದ್ದಾರೆ.

* ‘ಪಿಂಕ್’ ತಮಿಳು ರಿಮೇಕ್‌ನಲ್ಲಿ ತಾಪ್ಸಿ ಪನ್ನು ಮಾಡಿದ ಪಾತ್ರ ಮಾಡುತ್ತಿರುವಿರಿ. ಹೇಗನ್ನಿಸುತ್ತೆ?

ಖಂಡಿತವಾಗಿಯೂ ತಾಪ್ಸಿ ಮತ್ತು ನನ್ನ ಅಭಿನಯಕ್ಕೆ ಹೋಲಿಕೆ ಇದ್ದೇ ಇರುತ್ತೆ. ನಿಜ ಹೇಳಬೇಕೆಂದರೆ ನಾನು ಇದುವರೆಗೆ ‘ಪಿಂಕ್’ ಸಿನಿಮಾ ನೋಡಿಯೇ ಇಲ್ಲ. ಮೂಲ ಸಿನಿಮಾ ನೋಡಲು ನನಗೆ ಅವಕಾಶವಿತ್ತು. ಆದರೆ, ನಾನು ಬೇಕಂತಲೇ ಆ ಸಿನಿಮಾ ನೋಡಲಿಲ್ಲ. ಟ್ರೈಲರ್ ಮಾತ್ರ ನೋಡಿದೆ. ತಾಪ್ಸಿ ಪಾತ್ರಕ್ಕೆ ನನ್ನ ಕಡೆಯಿಂದ ನಾನು ಎಷ್ಟು ನ್ಯಾಯ ಸಲ್ಲಿಸಬಹುದೋ ಅಷ್ಟು ಸಲ್ಲಿಸಿದ್ದೇನೆ. ಆ ಪಾತ್ರಕ್ಕೆ ನನ್ನದೇ ಆದ ರೀತಿಯಲ್ಲಿ ಜೀವ ತುಂಬುವುದಕ್ಕೆ ನನಗೂ ಒತ್ತಡವಿತ್ತು. ಪಾತ್ರಕ್ಕೆ ನ್ಯಾಯ ಸಲ್ಲಿಸಿದ ತೃಪ್ತಿ ನನಗಿದೆ.

* ಬೇಸಿಗೆಗೆ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?

ಕಾಟನ್ ಬಟ್ಟೆಗೆ ನನ್ನ ಆದ್ಯತೆ. ಕೂದಲಿನ ವಿಚಾರದಲ್ಲಿ ನಾನಂತೂ ತುರುಬು ಅಥವಾ ಎತ್ತಿಕಟ್ಟುವ ಹೇರ್‌ಸ್ಟೈಲ್ ಮೊರೆ ಹೋಗುತ್ತೇನೆ. ಅದರಲ್ಲಿ ನಾನಾ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳಬಹುದು. ಅದು ನೋಡಲು ಸ್ಟೈಲಿಷ್, ಸ್ಫೋರ್ಟಿ, ಎಲಿಗೆಂಟ್ ಆಗಿಕಾಣುತ್ತೆ. ಕತ್ತಿನ ಭಾಗದಲ್ಲಿ ಸೆಖೆ ಅನಿಸುವುದಿಲ್ಲ. ಕೂದಲಿಗೆ ‘ಬಿ–ಬ್ಲಂಟ್’ ರಿಪೇರ್ ರೆಮಿಡಿ ಅನ್ನುವ ಪ್ರಾಡಕ್ಟ್‌ ಬಳಸುತ್ತೇನೆ. ಅದು ಬಿಸಿಲು ಮತ್ತು ಮಾಲಿನ್ಯದಿಂದ ಕೂದಲನ್ನು ಆರೋಗ್ಯಕರವಾಗಿರಿಸುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.