ಶ್ಯಾಮ್ ಬೆನಗಲ್
ನೀಲಿ ಬಣ್ಣದ ಕಿಟಕಿಗಳು, ಭಾವಕ್ಕೆ ತಕ್ಕಂತೆ ಚೌಕಟ್ಟು ಹಾಕಿದಂತಹ ಶಾಟ್‌ಗಳು, ಇವತ್ತು ಬ್ಲ್ಯಾಕ್ ಕಾಮಿಡಿ ಎಂದು ಯಾವುದನ್ನು ಕೊಂಡಾಡುತ್ತೇವೋ ಅದರ ಬೇರುಗಳು, ವೇಶ್ಯಾವಾಟಿಕೆಗೆ ಕಾನೂನು ಮಾನ್ಯತೆ ನೀಡಬೇಕೋ ಬೇಡವೋ ಎನ್ನುವ ಚರ್ಚೆಯ ಗೊಡವೆಗೆ ಹೋಗದೆ ಮನುಷ್ಯ ಸೂಕ್ಷ್ಮ ಸಂವೇದನೆಯೊಂದಿಗೆ ಅದನ್ನು ತೆರೆಮೇಲೆ ತಂದಿರುವ ರೀತಿ, ರಾಜಕೀಯ ವಿಡಂಬನೆ...
‘ಮಂಡಿ’ ಹಿಂದಿ ಸಿನಿಮಾದಲ್ಲಿ ಬಗೆದಷ್ಟೂ ಕಾಣುವ ಇಂತಹ ಸಂಗತಿಗಳೆಲ್ಲ ಶ್ಯಾಮ್ ಬೆನಗಲ್ ಎಂಬ ಪರ್ಯಾಯ ಸಿನಿಮಾ ವೈಯಾಕರಣಿಯ ಕಸುಬುದಾರಿಕೆಗೆ ಕನ್ನಡಿ ಹಿಡಿಯುತ್ತವೆ.
1970 ಹಾಗೂ 1980ರ ದಶಕಗಳಲ್ಲಿ ಇಡೀ ಭಾರತದಾದ್ಯಂತ ಹೊಸ ಅಲೆಯ ಸಿನಿಮಾಗಳು ಸದ್ದು ಮಾಡಿದ್ದವು. ಆ ಅಲೆಯ ಉಬ್ಬರದಲ್ಲಿ ಶ್ಯಾಮ್ ಬೆನಗಲ್ ಅವರದ್ದು ಎದ್ದುಕಾಣುವ ಕಾಣ್ಕೆ. ‘ಅಂಕುರ್’ ಹಿಂದಿ ಸಿನಿಮಾ ನೋಡಿ. ಕನ್ನಡದ ಅನಂತನಾಗ್–ಶಬಾನಾ ಆಜ್ಮಿ ಆಗಿನ್ನೂ ತಾಜಾಮುಖಗಳು; ಇಬ್ಬರಿಗೂ ಮೊದಲ ಚಿತ್ರ. ಅವರಿಬ್ಬರ ನಟನೆಯ ಪಲುಕುಗಳಲ್ಲಿ ಶ್ಯಾಮ್ ತಂದಿರುವ ಸಹಜತೆ ನೋಡಿದರೆ ಅವರ ಕುಶಲಮತಿ ಎಂಥದೆನ್ನುವುದು ಅರಿವಾಗುತ್ತದೆ.
ಶ್ಯಾಮ್ ಹುಟ್ಟಿದ್ದು ಹೈದರಾಬಾದ್‌ನಲ್ಲಿ. ಅವರ ತಂದೆ, ಕನ್ನಡಿಗರೇ ಆದ ಶ್ರೀಧರ್ ಬಿ. ಬೆನಗಲ್ ಫೋಟೊಗ್ರಾಫರ್ ಆಗಿದ್ದರು. ತಂದೆ ಉಡುಗೊರೆಯಾಗಿ ಕೊಟ್ಟ ಕ್ಯಾಮೆರಾ ಬಳಸಿ, 12ನೇ ವಯಸ್ಸಿನಲ್ಲಿಯೇ ಶ್ಯಾಮ್ ಒಂದು ಪುಟ್ಟ ಚಿತ್ರ ತಯಾರಿಸಿದ್ದರು. ಆಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಅರ್ಥಶಾಸ್ತ್ರ ಓದಿದರಾದರೂ, ಸಿನಿಮಾ ಗೀಳು ಮನಸ್ಸಿಗೆ ಅಂಟಿಕೊಂಡಿತ್ತು. ಅಲ್ಲೇ ಒಂದು ಸಿನಿಮಾ ಕ್ಲಬ್ ಹುಟ್ಟುಹಾಕಿದ್ದರು.
ಕಾಪಿರೈಟರ್ ಆಗಿ ಅವರು ಮುಂಬೈನ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆ ಅನುಭವದ ನಡುವೆಯೇ ಕಿರುಚಿತ್ರಗಳನ್ನು ಮಾಡುತ್ತಾ ಬಂದರು. ಆ ಕಂಪನಿಯ ಕ್ರಿಯೇಟಿವ್ ಹೆಡ್ ಕೂಡ ಆದರು. 1962ರಲ್ಲಿ ಅವರು ಗುಜರಾತಿ ಭಾಷೆಯಲ್ಲಿ ‘ಘೇರ್ ಬೈಟಾ ಗಂಗಾ’ (ಆವರಿಸಿದ ಗಂಗಾ) ಎಂಬ ಕಿರುಚಿತ್ರ ತಯಾರಿಸಿದರು. ಅದಾಗಿ, ಪೂರ್ಣಪ್ರಮಾಣದ ಚಿತ್ರವೊಂದು ಬರಲು ದಶಕವೇ ಬೇಕಾಯಿತು. 1963ರಲ್ಲಿ ಇನ್ನೊಂದು ಜಾಹೀರಾತು ಕಂಪೆನಿಗೆ ಜಿಗಿದರು. 900ಕ್ಕೂ ಹೆಚ್ಚು ಪ್ರಾಯೋಜಿತ ಸಾಕ್ಷ್ಯಚಿತ್ರಗಳು ಹಾಗೂ ಜಾಹೀರಾತು ಚಿತ್ರಗಳನ್ನು ತಯಾರಿಸಿದ ಅನುಭವ ಸಿನಿಮಾಕ್ಕೆ ಬೇಕಾದ ಗಟ್ಟಿ ಸರಕು ತಲೆಯಲ್ಲಿ ಹೊಳೆಯಲು ಕಾರಣವಾದವು. ಮುಂದೆ 70 ಸಾಕ್ಷ್ಯಚಿತ್ರಗಳನ್ನು ತಯಾರಿಸಲು ಪ್ರೇರಣೆಯನ್ನೂ ಕೊಟ್ಟವು.
1966ರಿಂದ 73ರ ಅವಧಿಯಲ್ಲಿ ಅವರು ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (ಎಫ್‌ಟಿಐಐ) ಬೋಧಿಸಿದರು. ಆಮೇಲೆ ಎರಡು ಅವಧಿಯಲ್ಲಿ ಅದೇ ಸಂಸ್ಥೆಯ ಅಧ್ಯಕ್ಷರೂ ಆದರು. ‘ಎ ಚೈಲ್ಡ್ ಆಫ್ ದಿ ಸ್ಟ್ರೀಟ್ಸ್’ 1967ರಲ್ಲಿ ಅವರು ತಯಾರಿಸಿದ ಕಿರುಚಿತ್ರ. ಅದು ಅವರಿಗೆ ಹೆಸರನ್ನು ತಂದುಕೊಟ್ಟಿತು.
ತೆಲಂಗಾಣದಲ್ಲಿ ಬಡವರ ಮೇಲಿನ ಆರ್ಥಿಕ ಹಾಗೂ ಲೈಂಗಿಕ ಶೋಷಣೆಯ ಎಳೆಗಳನ್ನು ಇಟ್ಟುಕೊಂಡು ಅವರು 1973ರಲ್ಲಿ ‘ಅಂಕುರ್’ ಸಿನಿಮಾ ನಿರ್ದೇಶಿಸಿದರು. ಆ ಚಿತ್ರಕ್ಕೆ 1975ರಲ್ಲಿ ರಾಷ್ಟ್ರ ಪ್ರಶಸ್ತಿ ಒಲಿದುಬಂತು. ಶಬಾನಾ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿಯೂ ಅದೇ ಚಿತ್ರದ ಅಭಿನಯಕ್ಕೆ ಸಂದಿತು.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದ ನಂತರದ ಪ್ರತಿರೋಧದ ವಸ್ತುವುಳ್ಳ ‘ನಿಶಾಂತ್’ ಅವರ ನಿರ್ದೇಶನದ ಎರಡನೇ ಚಿತ್ರ. ಅದಾದ ಮೇಲೆ ‘ಮಂಥನ್’, ‘ಭೂಮಿಕಾ’ ಚಿತ್ರಗಳೂ ಬಂದವು. ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಹಾಗೂ ಎಫ್‌ಟಿಐಐನಲ್ಲಿ ಕಲಿತವರಿಗೆ ಅವರು ಸಿನಿಮಾದಲ್ಲಿ ಅವಕಾಶ ನೀಡಿದ್ದು ವಿಶೇಷ. ನಾಸಿರುದ್ದೀನ್ ಶಾ, ಓಂ ಪುರಿ, ಸ್ಮಿತಾ ಪಾಟೀಲ್, ಅಮರೀಶ್ ಪುರಿ, ಕುಲಭೂಷಣ್ ಖರಬಂಧ ಎಲ್ಲರೂ ಶ್ಯಾಮ್ ಗರಡಿಯಿಂದ ಹೊಮ್ಮಿದ ಪ್ರತಿಭೆಗಳು.
ಸಹಕಾರ ಸಂಸ್ಥೆಗಳು ಸಿನಿಮಾಗಳಿಗೆ ಬಂಡವಾಳ ತೊಡಗಿಸಿದ್ದರಿಂದ ಅವರ ಭಿನ್ನ ವಸ್ತುಗಳ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಯಿತು. ಉದಾಹರಣೆಗೆ, ‘ಮಂಥನ್’ ಚಿತ್ರವನ್ನು ಗುಜರಾತ್ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ಮಿಸಿತ್ತು.
ಕಿರುತೆರೆಯ ಸಾಧ್ಯತೆಯನ್ನೂ ಶ್ಯಾಮ್ ದುಡಿಸಿಕೊಂಡರು. ಭಾರತೀಯ ರೈಲ್ವೆಗಾಗಿ ‘ಯಾತ್ರಾ’ ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು. ಜವಾಹರಲಾಲ್ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನು ಆಧರಿಸಿ ತಯಾರಾದ ‘ಭಾರತ್ ಏಕ್ ಖೋಜ್’ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಟಿ.ವಿ. ಸರಣಿ.
ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಫ್‌ಡಿಸಿ) ನಿರ್ದೇಶಕ ಆಗಿ 1980ರಿಂದ 86ರ ಅವಧಿಯಲ್ಲಿ ಅವರು ಕೆಲಸ ಮಾಡಿದರು. ಪರ್ಯಾಯ ಚಿತ್ರಗಳಿಗೆ ನಿರ್ಮಾಪಕರೇ ದುರ್ಲಭ ಎನ್ನುವ ಸಂದರ್ಭ ಸೃಷ್ಟಿಯಾದ ನಂತರವೂ ಅವರಿಗೆ ಸಿನಿಮಾಗಳನ್ನು ಮಾಡುವ ದಾರಿ ಸಿಗಲು ಅದು ನೆರವಾಯಿತು.
ಶಶಿ ಕಪೂರ್ ತರಹದ ನಟ ಅವರ ಬೆನ್ನಿಗೆ ನಿಂತಿದ್ದರಿಂದ ‘ಜುನೂನ್’, ‘ಕಲಿಯುಗ್’ ರೀತಿಯ ಹಿಂದಿ ಸಿನಿಮಾಗಳು ಬಂದವು.
ಮೊದಲಿಗೆ ಸಿದ್ಧಸೂತ್ರಗಳನ್ನು ಬದಿಗಿಟ್ಟು ಸಹಜತೆಗೆ ಒತ್ತು ಕೊಟ್ಟು ಚಿತ್ರಗಳನ್ನು ನಿರ್ದೇಶಿಸಿದ ಅವರು, 1985ರಲ್ಲಿ ಸತ್ಯಜಿತ್ ರೇ ಅವರ ಬದುಕು–ಕಾರ್ಯಗಳನ್ನು ಕುರಿತ ಡಾಕ್ಯು ಫಿಲ್ಮ್ ಕೂಡ ಮಾಡಿದರು. ‘ಸರ್ದಾರಿ ಬೇಗಂ’, ‘ಜುಬೇದಾ’ ರೀತಿಯ ಸಿನಿಮಾಗಳನ್ನು ಮಾಡಲು ಇದೇ ನಾಂದಿ.
ಸದಾ ಸಿನಿಮಾ ಕನವರಿಕೆಯಲ್ಲೇ ಇರುತ್ತಿದ್ದ ಅವರು ಡಿಸೆಂಬರ್ 14ರಂದು ತಮ್ಮ ಹುಟ್ಟುಹಬ್ಬದ ದಿನವೂ ಎದುರಲ್ಲಿ ಇಟ್ಟುಕೊಂಡಿರುವ ಎರಡು ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದರು. ‘ನಾನೇನೂ ಸಾಧನೆ ಮಾಡಿಲ್ಲ’ ಎಂದೂ ವಿನಮ್ರವಾಗಿ ಹೇಳಿದ್ದರು.
‘ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ (2022) ಅವರ ನಿರ್ದೇಶನದ ಕೊನೆಯ ಚಿತ್ರ. ‘ಸಂವಿಧಾನ’ ಕುರಿತು ಹತ್ತು ಭಾಗಗಳಲ್ಲಿ ನಿರ್ಮಿಸಿದ್ದ ಮಿನಿ ಸರಣಿಯು ಸಂವಿಧಾನ ರಚನೆಯಾದ ಪರಿಯನ್ನು ಕಟ್ಟಿಕೊಟ್ಟಿದೆ.
ಸದಾ ಮಾನವೀಯ ಸಂಬಂಧದ ತಂತುಗಳ ಹುಡುಕಾಟದಲ್ಲಿ ಇದ್ದ ಅವರ ಸೃಷ್ಟಿಕ್ರಿಯೆಗೆ ಇನ್ನೊಂದು ಉತ್ತಮ ಉದಾಹರಣೆ ‘ತ್ರಿಕಾಲ್’.
ಸದಾ ಸೃಜನಶೀಲ ಮನಸ್ಸನ್ನು ನೇವರಿಸುತ್ತಿದ್ದ ಶ್ಯಾಮ್ ಅವರಿನ್ನು ನೆನಪು. ಅವರ ಸೃಷ್ಟಿಕಾರ್ಯಗಳಂತೂ ಮತ್ತೆ ಮತ್ತೆ ಅನುರಣಿಸುತ್ತಿವೆ.
ಹಲವು ಗೌರವಗಳು
ಶ್ಯಾಮ್ ಬೆನಗಲ್ ಅವರ ಸಿನಿಮಾಗಳಿಗೆ ಬೇರೆ ಬೇರೆ ವಿಭಾಗಗಳಲ್ಲಿ ಹದಿನೆಂಟು ರಾಷ್ಟ್ರ ಪ್ರಶಸ್ತಿಗಳು ಸಂದಿವೆ. 2005ರಲ್ಲಿ ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಅವರು ಭಾಜನರಾಗಿದ್ದರು. 1976ರಲ್ಲಿಯೇ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರವೂ ಹುಡುಕಿಕೊಂಡು ಬಂದಿತ್ತು. 1991ರಲ್ಲಿ ಪದ್ಮಭೂಷಣದ ಗರಿ.
ನಿರ್ದೇಶಕ ಗುರುದತ್ ಹಾಗೂ ಶ್ಯಾಮ್ ಸಂಬಂಧಿಗಳು. ಇಬ್ಬರೂ ಬೆಳ್ಳಿತೆರೆಯಲ್ಲಿ ತಮ್ಮತನದ ರುಜು ಮಾಡಿದ ಧೀಮಂತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.