ತಮ್ಮ ಸಿನಿಮಾಗಳ ಮೂಲಕ ಚಂದನವನಕ್ಕೆ ಹೊಸಮುಖಗಳನ್ನು ಪರಿಚಯಿಸುತ್ತಾ ಬಂದವರು ನಿರ್ದೇಶಕ ಸಿಂಪಲ್ ಸುನಿ. ಅವರ ಮುಂದಿನ ಮೂರು ಸಿನಿಮಾಗಳಲ್ಲಿ ಮೂವರು ಹೊಸ ನಾಯಕರು ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಸದ್ಯ ನಾಲ್ಕು ಪ್ರಾಜೆಕ್ಟ್‌ಗಳು ಸುನಿ ಅವರ ಕೈಯಲ್ಲಿದ್ದು, ಅವುಗಳ ಅಪ್‌ಡೇಟ್ ಇಲ್ಲಿದೆ.
1. ಗತವೈಭವ
ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ನಟಿಸಿರುವ ಈ ಸಿನಿಮಾದ ಚಿತ್ರೀಕರಣ 2022ರಲ್ಲಿ ಆರಂಭವಾಗಿತ್ತು. ಕೆಲವು ತಿಂಗಳ ಹಿಂದೆ ಪೋರ್ಚುಗಲ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ವಿಎಫ್‌ಎಕ್ಸ್ ಕೆಲಸ ನಡೆಯುತ್ತಿದೆ. ದುಷ್ಯಂತ್‌ಗೆ ಇದು ಚೊಚ್ಚಲ ಸಿನಿಮಾ. ಸುನಿ ಪ್ರೇಮಕಥೆಯೊಂದನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯಲ್ಲಿ ತೆರೆಗೆ ತರುತ್ತಿದ್ದು, ವಿಎಫ್‌ಎಕ್ಸ್ ಕಲಾವಿದನ ಪಾತ್ರದಲ್ಲಿ ದುಷ್ಯಂತ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಕಲ್ಪನೆ ಮಾಡುವ ಅವತಾರಕ್ಕೆ ಪೂರಕವಾಗಿ ಆಶಿಕಾ ಕೂಡಾ ದೇವಕನ್ಯೆ, ಪೋರ್ಚುಗೀಸ್ ಮರ್ಚೆಂಟ್ ಹೀಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ದೇವಲೋಕ, ವಾಸ್ಕೋಡಗಾಮ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದಿದ್ದು ಹೀಗೆ ಹಲವು ಅಂಶಗಳಿದ್ದು, ವಿಎಫ್‌ಎಕ್ಸ್ ಬಹಳಷ್ಟಿದೆ. ನಾವು ಇಲ್ಲೇ ಹಡಗಿನ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಲು ಸೆಟ್ ಹಾಕುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಅಲ್ಲಿಗೇ ಹೋಗಿ ಚಿತ್ರೀಕರಣ ನಡೆಸುವುದು ಅಗ್ಗವಾಗಿತ್ತು. ಅಲ್ಲಿ ಅದೇ ಮಾದರಿಯ ಹಡಗು ಇತ್ತು. ‘ಮದಿರ’ ಎಂಬ ದ್ವೀಪದಲ್ಲಿ ಶೂಟಿಂಗ್ ನಡೆಸಿದೆವು. ಅಲ್ಲಿಯೂ ‘ಮದಿರ’ ಎಂದರೆ ಹಳೇ ವೈನ್ ಎಂದು ತಿಳಿದು ಆಶ್ಚರ್ಯವಾಯಿತು. ಹಲವು ಕಾರಣಗಳಿಂದ ಸಿನಿಮಾ ವಿಳಂಬವಾಯಿತು. ಚಿತ್ರವು ಜೂನ್ ಅಥವಾ ಜುಲೈನಲ್ಲಿ ತೆರೆಕಾಣುವ ಸಾಧ್ಯತೆ ಇದೆ’ ಎಂದರು ಸುನಿ.
2. ಮೋಡ ಕವಿದ ವಾತಾವರಣ
‘ಒಂದು ಸರಳ ಪ್ರೇಮಕತೆ’ ಚಿತ್ರದ ನಿರ್ಮಾಪಕರಾದ ಮೈಸೂರು ರಮೇಶ್ ನಿರ್ಮಾಣ ಮಾಡುತ್ತಿರುವ ಚಿತ್ರ ಇದಾಗಿದೆ. ಚಿತ್ರತಂಡವು ತಾರಾಬಳಗವನ್ನು ಇನ್ನಷ್ಟೇ ಘೋಷಿಸಬೇಕಿದೆ. ‘ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಈ ಸಿನಿಮಾವಿದೆ. ಗತವೈಭವ ಬಿಡುಗಡೆ ಬೆನ್ನಲ್ಲೇ ಈ ಸಿನಿಮಾ ತೆರೆಕಾಣಲಿದೆ. ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಸಂದರ್ಭದಲ್ಲೇ ರಿಲೀಸ್ ದಿನಾಂಕ ಘೋಷಣೆ ಮಾಡುತ್ತೇವೆ. ಇದರಲ್ಲೂ ಹೊಸಮುಖಗಳೇ. ಇದೂ ಸೈಂಟಿಫಿಕ್ ಫಿಕ್ಷನ್ ಪ್ರೇಮಕಥೆ ಜಾನರ್‌ನಲ್ಲಿದೆ’ ಎಂದಿದ್ದಾರೆ.
3. ದೇವರು ರುಜು ಮಾಡಿದನು
ವೀರಾಜ್, ದಿವಿತಾ ರೈ ಹಾಗೂ ಕೀರ್ತಿಕೃಷ್ಣ ನಟಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದೆ. ಚಿತ್ರವನ್ನು ಗೋವಿಂದ್ ರಾಜ್ ಸಿ.ಟಿ. ನಿರ್ಮಾಣ ಮಾಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಚಿತ್ರಗ್ರಹಣವಿದೆ.
4. ರಿಚಿ ರಿಚ್
ಈ ಸಿನಿಮಾ ಸದ್ಯ ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ‘ಬಿಗ್‌ಬಾಸ್’ ಹತ್ತನೇ ಆವೃತ್ತಿಯ ವಿಜೇತ ನಟ ಕಾರ್ತಿಕ್ ಮಹೇಶ್ ಚಿತ್ರದ ನಾಯಕ. ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ ಎವಿಆರ್ ಎಂಟರ್‌ಟೈನ್ಮೆಂಟ್ಸ್ ಎಂಬ ಬ್ಯಾನರ್‌ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ.
ಇದೊಂದು ಪರೀಕ್ಷೆಯ ಸಮಯ. ಮೊದಲು ಒಂದು ಅವರೇಜ್ ಸಿನಿಮಾಗೂ ಗಳಿಕೆ ಇತ್ತು. ಹಕ್ಕುಗಳ ಮಾರಾಟದಿಂದ ವಹಿವಾಟು ಆಗಿಬಿಡುತ್ತಿತ್ತು. ಈಗ ಬಿಡುಗಡೆ ಮೊದಲು ಯಾವ ವಹಿವಾಟು ಆಗುತ್ತಿಲ್ಲ. ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ನೋಡುತ್ತಾರೆ. ಇತ್ತೀಚೆಗೆ ಸೆಲಿಬ್ರಿಟಿ ಶೋಗಳಷ್ಟೇ ಹೌಸ್‌ಫುಲ್ ಆಗುತ್ತಿದೆ. ಮುಂದೆ ‘45’ ‘ಕೆಡಿ’ಯಂಥ ಹಲವು ನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಮತ್ತೆ ಚಿತ್ರಮಂದಿರಗಳು ತುಂಬಿಕೊಳ್ಳಬಹುದು ಎನ್ನುವ ನಿರೀಕ್ಷೆ ಇದೆ–ಸುನಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.