ADVERTISEMENT

ಹಾಡು ಕೈಬಿಟ್ಟಿದ್ದಕ್ಕೆ ಹರಿಕೃಷ್ಣ ವಿರುದ್ಧ ಪತ್ನಿ ವಾಣಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 12:56 IST
Last Updated 1 ಆಗಸ್ಟ್ 2019, 12:56 IST
ವಾಣಿ ಹರಿಕೃಷ್ಣ
ವಾಣಿ ಹರಿಕೃಷ್ಣ   

‘ನನ್ನ ಪತಿಯಿಂದಲೇ ನನಗೆ ಅನ್ಯಾಯವಾಗುತ್ತಿದೆ’ ಎಂದು ಗಾಯಕಿ ವಾಣಿ ಅವರು, ಫೇಸ್‌ಬುಕ್‌ನಲ್ಲಿ ಪತಿ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಮತ್ತು ‘ರಾಂಧವ’ ಚಿತ್ರದಲ್ಲಿ ವಾಣಿ ಅವರಿಂದ ಹಾಡಿಸಿದ್ದ ಹಾಡಗಳನ್ನು ಮತ್ತೆ ಬೇರೆ ಗಾಯಕಿಯರಿಂದ ಹಾಡಿಸಿರುವುದೇ ಅವರ ಈ ಆಕ್ರೋಶಕ್ಕೆ ಕಾರಣ.

ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಹರಿಕೃಷ್ಣ. ಈ ಚಿತ್ರದಲ್ಲಿ ಹಾಡೊಂದರನ್ನು ವಾಣಿ ಹಾಡಿದ್ದರಂತೆ. ಆದರೆ, ಬೇರೊಬ್ಬರಿಂದ ಅದೇ ಹಾಡನ್ನು ಹಾಡಿಸಿ ಸಿನಿಮಾದ ಆಡಿಯೊ ಬಿಡುಗಡೆ ಮಾಡಲಾಗಿದೆ. ಆಗಸ್ಟ್‌ 15ರಂದು ‘ರಾಂಧವ’ ಚಿತ್ರ ತೆರೆಕಾಣುತ್ತಿದ್ದು, ಹರಿಕೃಷ್ಣ ಅವರ ಶಿಷ್ಯ ಶಶಾಂಕ್‌ ಶೇಷಗಿರಿ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾದಲ್ಲೂ ಒಂದು ಹಾಡಿಗೆ ವಾಣಿ ಧ್ವನಿಯಾಗಿದ್ದರಂತೆ. ಆದರೆ, ಆ ಹಾಡನ್ನೂ ತೆಗೆದುಹಾಕಲಾಗಿದೆ ಎನ್ನುವುದು ಅವರ ಆರೋಪ.

ADVERTISEMENT

ಇದಕ್ಕೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗಿದೆ. ‘ಬದುಕೇ ಬೇಡ ಅನ್ನಿಸಿಬಿಡುತ್ತದೆ. ಒಂದು ಹಾಡೇ ಜೀವನವಲ್ಲ ಅಂತಾರೆ. ಆದರೆ, ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ ‘ಕುರುಕ್ಷೇತ್ರ’ ಮತ್ತು ‘ರಾಂಧವ’ ಚಿತ್ರಗಳಲ್ಲಿ ನನ್ನನ್ನು ಹಾಡಿಸಿ ಧ್ವನಿ ಉಳಿಸಿಲ್ಲ. ನಮ್ಮನ್ನು ಹಾಡಿಸಲೇಬಾರದು. ನಂತರ ಬೇರೆಯವರನ್ನು ಹಾಡಿಸುವುದಾದರೆ’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ಪಡೆಯಲು ಹರಿಕೃಷ್ಣ ಅವರು ಮೊಬೈಲ್‌ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.