ADVERTISEMENT

ಸಿಂಗಲ್‌ ಟೇಕ್‌ನಲ್ಲಿ ಸೆರೆಹಿಡಿದ ‘ಮೋಡ..’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 20:36 IST
Last Updated 16 ಅಕ್ಟೋಬರ್ 2025, 20:36 IST
ಶೀಲಂ, ಮೋಕ್ಷ ಕುಶಾಲ್‌ 
ಶೀಲಂ, ಮೋಕ್ಷ ಕುಶಾಲ್‌    

ಸಿನಿಮಾದ ದೃಶ್ಯಗಳನ್ನು ಸಿಂಗಲ್‌ ಟೇಕ್‌ನಲ್ಲಿ (ಯಾವುದೇ ಕಟ್‌ ಇಲ್ಲದೆ) ತೆಗೆಯುವುದು ಸಾಮಾನ್ಯ. ಆದರೆ ನಿರ್ದೇಶಕ ಸಿಂಪಲ್‌ ಸುನಿ ಹಾಡೊಂದನ್ನು ಸಿಂಗಲ್‌ ಟೇಕ್‌ನಲ್ಲಿ ಚಿತ್ರೀಕರಿಸಿದ್ದಾರೆ. ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾದ //‘ನನ್ನದೆಯಾ ಹಾಡೊಂದನು..’ ಹಾಡನ್ನು ಈ ರೀತಿ ಚಿತ್ರಿಸಲಾಗಿದೆ. ಸಿನಿಮಾ 2026ರ ಜನವರಿ 9ರಂದು ತೆರೆಕಾಣುವ ಸಾಧ್ಯತೆ ಇದೆ. 

ನಾಲ್ಕು ನಿಮಿಷದ ಈ ಹಾಡಿನಲ್ಲಿ ಚಿತ್ರದ ಹೀರೊ ಶೀಲಂ ಎಂ.ಸ್ವಾಮಿ ಹಾಗೂ ನಾಯಕಿಯರಾದ ಮೋಕ್ಷ ಕುಶಾಲ್‌ ಹಾಗೂ ಸಾತ್ವಿಕ, ಜೊತೆಗೆ ಸಿಂಪಲ್‌ ಸುನಿ, ತಾಂತ್ರಿಕ ತಂಡ, ನಿರ್ಮಾಪಕರಾದ ಶ್ರೀರಂಗರಾಜು, ರಮೇಶ್‌ ಮೈಸೂರು, ಲೋಕೇಶ್‌ ಬೆಳವಾಡಿ ಹಾಗೂ ಗೋವಾ ರಮೇಶ್‌ ನಟಿಸಿರುವುದು ವಿಶೇಷ. ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು 24 ಗಂಟೆ ನಿರಂತರವಾಗಿ ಚಿತ್ರೀಕರಣ ನಡೆಸಿದ ಚಿತ್ರತಂಡ. ಸುಮಾರು 14 ಟೇಕ್‌ಗಳನ್ನು ತಂಡ ತೆಗೆದುಕೊಂಡಿದೆ. ಹಾಡಿಗಾಗಿ 150 ಜನರು ಕೆಲಸ ಮಾಡಿದ್ದು, ವಿಲಿಯಂ ಡೇವಿಡ್, ಅನಿಲ್‌ ಕ್ಯಾಮೆರಾ ಹಿಂದಿದ್ದರು. ಮಧು ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂಚಿತ್‌ ಹೆಗಡೆ ದನಿಯಿದೆ. 

ಸಿನಿಮಾ ಬಗ್ಗೆ ಮಾಹಿತಿ ನೀಡಿದ ಸುನಿ, ‘ಈ ಹಾಡು ಸಿನಿಮಾದೊಳಗೂ ಇರಲಿದೆ. ಮೂರ್ನಾಲ್ಕು ಸಿನಿಮಾಗಳನ್ನು ಬೇರೆ ಬೇರೆ ವರ್ಷದಲ್ಲಿ ಆರಂಭಿಸಿದ್ದೆ. ಆದರೆ ಬಿಡುಗಡೆ ಸಮಯದಲ್ಲಿ ಒಟ್ಟಿಗೆ ಬಂದಿದೆ. ಈ ಸಿನಿಮಾವನ್ನು ನ.14ಕ್ಕೆ ಬಿಡುಗಡೆ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದೆವು. ‘ಗತವೈಭವ’ ಸಿನಿಮಾವನ್ನು ಡಿ.25ಕ್ಕೆ ತೆರೆಗೆ ತರುವ ನಿರ್ಧಾರ ಮಾಡಿದ್ದೆವು. ಆದರೆ ಆ ಸಮಯದಲ್ಲಿ ದೊಡ್ಡ ಸಿನಿಮಾಗಳು ಇರುವ ಕಾರಣ ‘ಗತವೈಭವ’ವನ್ನು ನ.14ಕ್ಕೆ ರಿಲೀಸ್‌ ಮಾಡುವುದಾಗಿ ಘೋಷಿಸಿದೆವು. ‘ಮೋಡ ಕವಿದ ವಾತಾವರಣ’ ಸಿನಿಮಾ ಸಿದ್ಧವಾಗಿ ಒಂದು ವರ್ಷ ಉರುಳಿದೆ. ಮುಂದಿನ ವರ್ಷದ ಜ.9ರಂದು ಸಿನಿಮಾ ತೆರೆಗೆ ತರುವ ಯೋಚನೆಯಿದೆ’ ಎಂದರು. 

ADVERTISEMENT

‘ಈ ಹಾಡಿನ ಚಿತ್ರೀಕರಣವೇ ಭಿನ್ನ ಅನುಭವ. ಶೀಲಂ ಮೊದಲ ಶಾಟ್‌ನಲ್ಲಿ ಮೀನಿನಂತೆ ನೃತ್ಯ ಮಾಡಿದ್ದರು. ಟೇಕ್‌ ಆಗುತ್ತಾ ಆಗುತ್ತಾ ಹಾವಿನಂತೆ ಆದರು. ಹಲವು ಟೇಕ್‌ಗಳ ಬಳಿಕ ಸುಸ್ತಾಗಿತ್ತು. ಗ್ರಾಫಿಕ್ಸ್‌ನಲ್ಲಿ ಸರಿ ಮಾಡಿ ಒಂದು ಟೇಕ್‌ನಲ್ಲೇ ಮಾಡಿದೆವು ಎಂದು ಹೇಳಿಕೊಳ್ಳೋಣ ಎಂದಿದ್ದೆ. ಆದರೆ ಕಲಾವಿದರು ಒಪ್ಪಲೇ ಇಲ್ಲ. ಸಿಂಗಲ್‌ ಟೇಕ್‌ನಲ್ಲೇ ಹಾಡು ಬರಬೇಕು ಎಂದು ಪಟ್ಟುಹಿಡಿದು ಮಾಡಿಸಿದರು. ನನ್ನ ಜೊತೆಯೇ ಏಳು ವರ್ಷಗಳಿಂದ ಸಹ ನಿರ್ದೇಶಕರಾಗಿದ್ದ ಶೀಲಂ ಮೊದಲ ಬಾರಿಗೆ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದಾರೆ. ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದು, ರಿವರ್ಸ್‌ ಸ್ಕ್ರೀನ್‌ಪ್ಲೇಯಲ್ಲಿ ಈ ಸಿನಿಮಾವಿರಲಿದೆ’ ಎನ್ನುತ್ತಾರೆ ಸುನಿ. 

Quote - ಹೀರೊಗಳ ಜನ್ಮದಿನದಂದು ಸಿನಿಮಾದ ಹಾಡುಗಳ ಬಿಡುಗಡೆ ಸಾಮಾನ್ಯ. ನಾವು ನಿರ್ದೇಶಕರ ಜನ್ಮದಿನದಂದು ಹಾಡು ಬಿಡುಗಡೆ ಮಾಡಿದ್ದೇನೆ. –ಶೀಲಂ ಎಂ.ಸ್ವಾಮಿ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.