ADVERTISEMENT

ಸೋನಲ್‌ ಮೊಂತೆರೋ ಸಂದರ್ಶನ: ಸೋನಲ್‌ಗೆ ಸಿಕ್ಕ ಹೊಸ ಗೈಡ್‌

ಅಭಿಲಾಷ್ ಪಿ.ಎಸ್‌.
Published 28 ಮೇ 2025, 0:52 IST
Last Updated 28 ಮೇ 2025, 0:52 IST
ಸೋನಲ್‌, ತರುಣ್‌ 
ಸೋನಲ್‌, ತರುಣ್‌    

‘ರಾಬರ್ಟ್‌’ ಸಿನಿಮಾ ಬಳಿಕ ವಿನೋದ್‌ ಪ್ರಭಾಕರ್ ಹಾಗೂ ಸೋನಲ್‌ ಮೊಂತೆರೋ ಜೋಡಿಯಾಗಿ ನಟಿಸುತ್ತಿರುವ ‘ಮಾದೇವ’ ಸಿನಿಮಾ ಜೂನ್‌ 6ಕ್ಕೆ ಸಿನಿಮಾ ತೆರೆಕಾಣಲಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಮುಂದಿನ ಸಿನಿಪಯಣದ ಬಗ್ಗೆ ನಟಿ ಸೋನಲ್‌ ಮಾತನಾಡಿದ್ದಾರೆ. 

‘ಮದುವೆಯಾದ ಬಳಿಕ ನಾನು ನಾಯಕಿಯಾಗಿ ನಟಿಸಿದ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ’ ಎಂದು ಮಾತು ಆರಂಭಿಸಿದ ಸೋನಲ್‌, ‘ರಾಬರ್ಟ್‌’ ಸಿನಿಮಾದಲ್ಲಿ ನಾನು ಹಾಗೂ ವಿನೋದ್‌ ಪ್ರಭಾಕರ್‌ ಅವರು ‘ತನು–ರಾಘವ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಈ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ‘ರಾಬರ್ಟ್‌’ ಬಳಿಕ ನಮ್ಮಿಬ್ಬರ ಜೋಡಿಯ ಸಿನಿಮಾ ಯಾವಾಗ ಎಂದು ಹಲವರು ಕೇಳುತ್ತಿದ್ದರು. ಒಳ್ಳೆಯ ಕಥೆ ಬಂದರೆ ಮತ್ತೊಮ್ಮೆ ಜೋಡಿಯಾಗಿ ನಟಿಸೋಣ ಎಂದು ಇಬ್ಬರೂ ಸಮಯ ತೆಗೆದುಕೊಂಡೆವು’ ಎಂದರು. 

‘ಮಾದೇವ’ ಸಿನಿಮಾದ ಕಥೆಯನ್ನು ವಿನೋದ್‌ ಅವರೇ ನನ್ನ ಬಳಿ ಕಳುಹಿಸಿದರು. ಕಥೆ ಹಾಗೂ ಚಿತ್ರದೊಳಗಿನ ನಾಯಕಿಯ ಪಾತ್ರ ಬಹಳ ಇಷ್ಟವಾಯಿತು. ಇಲ್ಲಿಯವರೆಗೂ ಗ್ಲಾಮರಸ್‌ ಪಾತ್ರಗಳನ್ನು ಮಾಡಿದ್ದೇನೆ. ಇದು ಡಿ–ಗ್ಲಾಮರ್‌ ಪಾತ್ರ. ಹೀಗಾಗಿ ತಕ್ಷಣದಲ್ಲೇ ಒಪ್ಪಿಕೊಂಡೆ. ಇದೊಂದು ಹಳ್ಳಿ ಹುಡುಗಿಯ ಪಾತ್ರ. ಮೃಗದ ವ್ಯಕ್ತಿತ್ವ ಹೊಂದಿರುವ ನಾಯಕನನ್ನು ಮನುಷ್ಯನನ್ನಾಗಿ ಪರಿವರ್ತಿಸುವ ನಾಯಕಿಯಾಗಿ ಇಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ನಾಯಕಿಗೆ ಹೆಚ್ಚಿನ ಸಂಭಾಷಣೆಯಿದೆ ಹಾಗೂ ತೆರೆ ಅವಧಿಯಿದೆ. ಇದೀಗ ‘ತನು–ರಾಘವ’ ಜೋಡಿ ‘ಪಾರ್ವತಿ–ಮಾದೇವ’ನಾಗಿ ತೆರೆ ಮೇಲೆ ಬರಲಿದೆ’ ಎನ್ನುತ್ತಾರೆ ಅವರು. 

ADVERTISEMENT

ಚಿತ್ರೀಕರಣ ಹಂತದಲ್ಲಿ ನಾಲ್ಕು ಸಿನಿಮಾ 

‘ನಾನು ಯಾವುದೇ ಯೋಜನೆಗಳನ್ನು ಹಾಕಿ ಹೆಜ್ಜೆ ಇಟ್ಟವಳಲ್ಲ. ಬಂದಂತಹ ಅವಕಾಶಗಳಲ್ಲಿ ನನಗಿಷ್ಟವಾಗಿರುವುದನ್ನು ಆಯ್ದುಕೊಳ್ಳುತ್ತಿದ್ದೆ. ಹೀಗಾಗಿ ಸಿನಿ ಬ್ಯಾಂಕ್‌ ಹಿಗ್ಗುತ್ತಲೇ ಇತ್ತು. ತುಳು ಚಿತ್ರರಂಗದಿಂದ ಸಿನಿ ಪಯಣ ಆರಂಭಿಸಿದ ದಿನದಿಂದಲೂ ಒಂದು ದಿನವೂ ಸುಮ್ಮನೆ ಕುಳಿತಿಲ್ಲ. ಮದುವೆಯಾದ ಬಳಿಕವೂ ಸಿನಿಮಾ ಕಥೆ ಕೇಳುತ್ತಿದ್ದೇನೆ. ಯಾವುದನ್ನೂ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಒಪ್ಪಿಕೊಂಡ ನಾಲ್ಕು ಸಿನಿಮಾಗಳ ಚಿತ್ರೀಕರಣವೇ ಬಾಕಿ ಇದೆ. ಕೋಮಲ್‌ ಅವರ ‘ರೋಲೆಕ್ಸ್‌’, ಅಜಯ್‌ ರಾವ್‌ ಅವರ ಜೊತೆಗಿನ ‘ರಾಧೇಯ’, ವಸಿಷ್ಠ ಸಿಂಹ ಅವರ ಜೊತೆಗಿನ ‘ತಲ್ವಾರ್‌ ಪೇಟೆ’, ‘ಸರೋಜಿನಿ’ ಚಿತ್ರೀಕರಣ ಹಂತದಲ್ಲಿದೆ. ಇದನ್ನು ಮೊದಲು ಪೂರ್ಣಗೊಳಿಸಬೇಕಾಗಿದೆ. ಆನಂತರವಷ್ಟೇ ಮುಂದಿನ ಸಿನಿಮಾಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ. ‘ಬುದ್ಧಿವಂತ–2’ ತೆರೆಕಾಣಬೇಕಿದೆ’ ಎಂದರು ಸೋನಲ್‌. 

ಜೊತೆ ಜೊತೆಗೆ ಹೆಜ್ಜೆ 

‘ಇದೀಗ ನನ್ನ ಜೀವನಕ್ಕೊಬ್ಬರು ಅತ್ಯುತ್ತಮ ಮಾರ್ಗದರ್ಶಕರು ದೊರಕಿದ್ದಾರೆ. ಮದುವೆಯ ಮುಂಚೆ ಅಮ್ಮನೇ ನನ್ನ ಮಾರ್ಗದರ್ಶಿಯಾಗಿದ್ದರು. ಇದೀಗ ಸಿನಿಮಾ ಕುಟುಂಬಕ್ಕೇ ಸೇರಿದ್ದೇನೆ. ತರುಣ್‌ ಸುಧೀರ್‌ ಅವರ ಸಲಹೆ, ಮಾರ್ಗದರ್ಶನಗಳನ್ನು ಪಡೆದುಕೊಂಡು ಹೆಜ್ಜೆ ಇಡುತ್ತಿದ್ದೇನೆ. ಕಥೆ ವಿಚಾರದಲ್ಲಿ ಅವರು ಯಾವುದಕ್ಕೂ ಒತ್ತಡ ಹಾಕುವುದಿಲ್ಲ. ತರುಣ್‌ ಬಹಳ ಪಕ್ವವಾದ ಯೋಚನೆಯುಳ್ಳವರು. ನನ್ನ ನಿರ್ಧಾರಗಳು ತಪ್ಪಾಗಿದ್ದಲ್ಲಿ ಸಲಹೆ ನೀಡುತ್ತಾರೆ. ಈ ಸಿನಿಪಯಣದಲ್ಲಿ ಜೊತೆಜೊತೆಯಾಗಿ ಹೆಜ್ಜೆ ಹಾಕುವ ಇಚ್ಛೆ ನಮ್ಮದು’ ಎಂದು ಸೋನಲ್‌ ಮಾತಿಗೆ ವಿರಾಮವಿತ್ತರು. 

ನೈಜ ಘಟನೆ ಸ್ಫೂರ್ತಿ

ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ‘ಮಾದೇವ’ ಸಿನಿಮಾದ ಕಥೆಯು 1965 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಚಿತ್ರದ ನಾಯಕ ಜೈಲುಗಳಲ್ಲಿ ನೇಣು ಹಾಕುವ ಕೆಲಸ ಮಾಡುತ್ತಿರುತ್ತಾನೆ. ಕನಕಪುರ ಚನ್ನಪಟ್ಟಣ ಶಿವಮೊಗ್ಗ ರಾಮೋಜಿ ಫಿಲಂ ಸಿಟಿ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ನವೀನ್ ರೆಡ್ಡಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಖಳನಾಯಕನಾಗಿ ಶ್ರೀನಗರ ಕಿಟ್ಟಿ ನಟಿಸಿದ್ದು ಶ್ರುತಿ ಮತ್ತು ಅಚ್ಯುತ್ ಕುಮಾರ್ ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.