ADVERTISEMENT

ಸೋನು ನಿಗಮ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ಸೋನು ನಿಗಮ್‌</p></div>

ಸೋನು ನಿಗಮ್‌

   

ಬೆಂಗಳೂರು: ‘ಕನ್ನಡದ ಅಭಿಮಾನವನ್ನು ಪಹಲ್ಗಾಮ್‌ ಘಟನೆಗೆ ತಳಕು ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ಗಾಯಕ ಸೋನು ನಿಗಮ್ ವಿರುದ್ಧ ‍ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು’ ಎಂದು ಆದೇಶಿಸಿರುವ ಹೈಕೋರ್ಟ್‌, ಪ್ರಕರಣದ ಅಂತಿಮ ವರದಿ ಸಲ್ಲಿಕೆಗೆ ಮಧ್ಯಂತರ ತಡೆ ನೀಡಿದೆ.

‘ನನ್ನ ವಿರುದ್ಧ ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಮುಂಬೈನ ಸೋನು ನಿಗಮ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಸೋನು ನಿಗಮ್‌ ಪರ ವಕೀಲರು, ‘ಸೋನು ನಿಗಮ್‌ ಖ್ಯಾತ ಗಾಯಕರಿದ್ದು, ಪೊಲೀಸರ ಮುಂದೆ ತನಿಖೆಗೆ ಖುದ್ದು ಹಾಜರಾದರೆ ನಾಟಕೀಯ ಬೆಳವಣಿಗೆ ಘಟಿಸುವ ಸಾಧ್ಯತೆಯಿದೆ. ಹಾಗಾಗಿ, ಆನ್‌ಲೈನ್‌ ಮೂಲಕ ಅಥವಾ ಲಿಖಿತ ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪರ ವಕೀಲರು, ‘ಅರ್ಜಿದಾರರ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದ್ದು, ಅವರನ್ನು ಖುದ್ದು ವಿಚಾರಣೆಗೆ ಒಳಪಡಿಸಿದಾಗ ಮಾತ್ರವೇ, ಅವರು ಯಾವ ಉದ್ದೇಶದಿಂದ ಆಕ್ಷೇಪಾರ್ಹ ಹೇಳಿಕೆ ನೀಡಿದರು ಎಂಬುದನ್ನು ತಿಳಿಯಲು ಸಾಧ್ಯ. ಅಂತೆಯೇ, ತನಿಖಾಧಿಕಾರಿಗಳು ಮಹಜರು ಪ್ರಕ್ರಿಯೆ ನಡೆಸಬೇಕಿದೆ. ಸೋನು ನಿಗಮ್‌ ವಿಚಾರಣೆಗೆ ಹಾಜರಾದರೆ ಭದ್ರತೆ ಕಲ್ಪಿಸುವುದು ಪೊಲೀಸರ ಕರ್ತವ್ಯ. ಹಾಗಾಗಿ, ಅವರು ಖುದ್ದಾಗಿ ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ವಿಡಿಯೊ ಕಾನ್ಫರೆನ್ಸ್‌ ಮೂಲಕ ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲು ಏನು ಸಮಸ್ಯೆ’ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರನ್ನು ಪ್ರಶ್ನಿಸಿತಲ್ಲದೆ, ‘ತನಿಖಾಧಿಕಾರಿ ವಿಡಿಯೊ ಕಾನ್ಪರೆನ್ಸ್‌ ಮೂಲಕ ಸೋನು ನಿಗಮ್‌ ಹೇಳಿಕೆ ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ತನಿಖಾಧಿಕಾರಿಗಳೇ ಸೋನು ನಿಗಮ್‌ ಇರುವ ಸ್ಥಳಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಇದಕ್ಕೆ ತಗಲುವ ಖರ್ಚನ್ನು ಸೋನು ನಿಗಮ್‌ ಭರಿಸಬೇಕು’ ಎಂದು ಆದೇಶಿಸಿತು.

ಪ್ರಕರಣವೇನು?

‘ಸೋನು ನಿಗಮ್‌ ಅವರು ‘ಈಸ್ಟ್‌ ಪಾಯಿಂಟ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ’ಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ‘ಕರ್ನಾಟಕ ರಕ್ಷಣಾ ವೇದಿಕೆ’ಯ (ನಾರಾಯಣಗೌಡ ಬಣ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ ಇದೇ 2ರಂದು ದೂರು ನೀಡಿದ್ದರು. ತನಿಖೆಗೆ ಹಾಜರಾಗುವಂತೆ ಸೋನು ನಿಗಮ್‌ ಅವರಿಗೆ ಅವಲಹಳ್ಳಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.