ADVERTISEMENT

ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಘೋಷಿಸಿದ ನಟ ಸೋನು ಸೂದ್‌

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2020, 6:06 IST
Last Updated 15 ಸೆಪ್ಟೆಂಬರ್ 2020, 6:06 IST
ಸೋನು ಸೂದ್‌
ಸೋನು ಸೂದ್‌   

ಉನ್ನತ ಶಿಕ್ಷಣ ಪಡೆಯಲು ಬಯಸುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ತಾಯಿಯ ಹೆಸರಿನಲ್ಲಿ ಸ್ಕಾಲರ್‌ಶಿಪ್‌ ನೀಡುವುದಾಗಿ ತಿಳಿಸಿದ್ದಾರೆ ನಟ ಸೋನು ಸೂದ್‌. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಸೋನು ‘ಗುರಿ ಸಾಧಿಸಲು ಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸವಾಲು ಎದುರಾಗಬಾರದು’ ಎಂದಿದ್ದಾರೆ.

‘ಎಲ್ಲರೂ ಓದಿ ವಿದ್ಯಾವಂತರಾದಾಗ ದೇಶವೂ ಬೆಳೆಯುತ್ತದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರ್ಣ ಪ್ರಮಾಣದ ಸ್ಕಾಲರ್‌ಶಿಪ್‌ ಘೋಷಿಸುತ್ತಿದ್ದೇನೆ. ಹಣದ ಕೊರತೆ ಎಂಬುದು ಯಾರಿಗೂ ತಮ್ಮ ಗುರಿಯನ್ನು ಮುಟ್ಟಲು ಹಿಂದೇಟು ಹಾಕುವಂತೆ ಮಾಡಬಾರದು. scholarships@sonusood.me ನಲ್ಲಿ ನಮೂದಿಸಿಕೊಳ್ಳಿ. ಖಂಡಿತ ನಾನು ಸಹಾಯ ಮಾಡುತ್ತೇನೆ’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಈ ಮೂಲಕ ಲಾಕ್‌ಡೌನ್‌ ಸಮಯದಲ್ಲಿ ನೂರಾರು ಜನರಿಗೆ ನೆರವಾದ ಸೋನು ಸೂದ್ ಈಗ ಸ್ಕಾಲರ್‌ಶಿಪ್‌ ಮೂಲಕ ದೇಶದ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ.

‘ನಮ್ಮ ಸಾಮರ್ಥ್ಯ ಹಾಗೂ ಕಠಿಣ ಶ್ರಮ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ಆರ್ಥಿಕ ಸ್ಥಿತಿ ಹಾಗೂ ಹಿನ್ನೆಲೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಶಾಲೆಯ ನಂತರದ ಶಿಕ್ಷಣಕ್ಕಾಗಿ ನಾನು ವಿದ್ಯಾರ್ಥಿವೇತನ ನೀಡುತ್ತೇನೆ. ಇದರಿಂದ ನೀವು ಯಾವುದೇ ಸಮಸ್ಯೆಯಿಲ್ಲದೇ ಮುಂದೆ ಸಾಗಬಹುದು ಹಾಗೂ ದೇಶಕ್ಕೆ ಅಭಿವೃದ್ಧಿಯ ಕೊಡುಗೆ ನೀಡಬಹುದು’ ಎಂದಿದ್ದಾರೆ.

ಸೋನು ತಮ್ಮ ದಿವಂಗತ ತಾಯಿ ಪ್ರೋ. ಸರೋಜ್ ಸೂದ್‌ ಅವರ ಹೆಸರಿನಲ್ಲಿ ಸ್ಕಾಲರ್‌ಶಿಪ್ ನೀಡುತ್ತಿದ್ದಾರೆ. ವಾರ್ಷಿಕ ಆದಾಯ 2 ಲಕ್ಷಕ್ಕೂ ಕಡಿಮೆ ಇರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ ಪಡೆಯಲು ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.