
ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ‘ಆಲ್ಫಾ-ಮೆನ್ ಲವ್ ವೆಂಜೆಂನ್ಸ್’ ಸಿನಿಮಾದ ಟ್ರೇಲರ್ ಅನ್ನು ಇತ್ತೀಚೆಗೆ ನಟ ಶ್ರೀಮುರಳಿ ಬಿಡುಗಡೆಗೊಳಿಸಿದರು.
ಎಲ್.ಎ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಮುರಳಿ, ‘ಇದು ಹೇಮಂತ್ ನಟನೆಯ ಚೊಚ್ಚಲ ಸಿನಿಮಾವಾಗಿದ್ದರೂ ಅವರ ತಯಾರಿ ಕಂಡು ಸಂತೋಷವಾಗಿದೆ. ತಂಡದ ಶ್ರಮ ಟ್ರೇಲರ್‌ನಲ್ಲಿ ಕಾಣುತ್ತದೆ’ ಎನ್ನುತ್ತಾ ತಂಡಕ್ಕೆ ಶುಭಹಾರೈಸಿದರು.
‘ನಾನು ಶ್ರೀಮುರಳಿ ಅವರ ಅಭಿಮಾನಿ. ನಾನು ನಾಯಕನಾಗಲು ಅವರ ನಟನೆಯ ‘ಉಗ್ರಂ’ ಸಿನಿಮಾವೇ ಸ್ಫೂರ್ತಿ. ನಾಯಕನಾಗಿ ನಟಿಸಲು ಬೇಕಾದ ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ಅಚ್ಯುತ್ ಕುಮಾರ್, ಅವಿನಾಶ್ ಅವರಂತಹ ಖ್ಯಾತ ನಟರ ಜೊತೆ ತೆರೆಹಂಚಿಕೊಂಡ ಹೆಮ್ಮೆ ಇದೆ. ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ’ ಎಂದರು ಹೇಮಂತ್ ಕುಮಾರ್.
ಸಿನಿಮಾ ಫೆ.20ರಂದು ತೆರೆಗೆ ಬರುತ್ತಿದೆ. ‘ಬಿಗ್‌ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ನಾಯಕಿಯರಾಗಿ ಅಯಾನ, ಗೋಪಿಕಾ ಸುರೇಶ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.