ಈ ಹಿಂದೆ ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ ಗೀತಪ್ರಿಯ ಸುರೇಶ್‌ಕುಮಾರ್ ಇದೀಗ ‘ಅಪರಿಚಿತೆ’ ಎಂಬ ಪ್ರಾಜೆಕ್ಟ್ ಘೋಷಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು.
ಸಿನಿಮಾ ಕುರಿತು ಮಾತನಾಡಿದ ಗೀತಪ್ರಿಯ, ‘ಸಾಮಾಜಿಕ ಸಂದೇಶ ಇರುವಂತಹ ಸಿನಿಮಾಗಳಲ್ಲಿ ನಟಿಸಲು ನನಗೆ ಇಷ್ಟ. ಹಿಂದಿನ ಸಿನಿಮಾದಂತೆ ಇದೂ ಸಾಮಾಜಿಕ ಸಂದೇಶವಿರುವ ಸಿನಿಮಾ. ಚಿತ್ರೀಕರಣ ಆರಂಭವಾಗಿದ್ದು, ಇದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ನಾನು ಶಿಕ್ಷಕಿಯ ಪಾತ್ರ ಮಾಡುತ್ತಿದ್ದೇನೆ’ ಎಂದರು.
ಚಿತ್ರಕ್ಕೆ ವಿಶ್ವನಾಥ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿಂಧು ಲೋಕನಾಥ್, ಆರ್.ಜೆ.ನಿಖಿತಾ, ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಪುತ್ರ ರೋಹಿತ್ ಪ್ರಮುಖ ಪಾತ್ರದಲ್ಲಿದ್ದಾರೆ. ಥ್ರಿಲ್ಲರ್ ಜಾನರ್‌ನಲ್ಲಿ ಈ ಸಿನಿಮಾವಿದೆ. ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಮರ ಫಿಲಂಸ್ ಬ್ಯಾನರ್ ಮೂಲಕ ಗೀತಪ್ರಿಯ ಅವರ ಪತಿ ಸುರೇಶ್‌ಕುಮಾರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
‘ಕೋವಿಡ್ ಬಳಿಕ ನಾನು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಈ ಸಿನಿಮಾದಲ್ಲಿದೆ. ಮುಖ್ಯವಾಗಿ 40 ವರ್ಷದ ನಂತರ ನಾನು, ನನ್ನ ಮಗ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದೇವೆ’ ಎಂದರು ಶ್ರೀನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.