ADVERTISEMENT

ಅಸ್ಸಾಂ, ಬಿಹಾರ ಜನತೆಗಾಗಿ ಮಿಡಿದ ತಾರಾ ದಂಪತಿಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 14:24 IST
Last Updated 31 ಜುಲೈ 2020, 14:24 IST
ಪ್ರಿಯಾಂಕಾ ಚೋಪ್ರಾ–ನಿಕ್ ಜೋನಾಸ್‌
ಪ್ರಿಯಾಂಕಾ ಚೋಪ್ರಾ–ನಿಕ್ ಜೋನಾಸ್‌   

ತಾರಾ ದಂಪತಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಪ್ರವಾಹದಿಂದ ಹಾನಿಗೊಳಗಾದ ಅಸ್ಸಾಂ ಮತ್ತು ಬಿಹಾರದ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

‘ನಾವೆಲ್ಲರೂ ಇನ್ನೂ ಜಾಗತಿಕ ಸಾಂಕ್ರಾಮಿಕ ಕೊರೊನಾದ ವಿರುದ್ಧ ಹೋರಾಡುತ್ತಿರುವಾಗಲೇ ಅಸ್ಸಾಂ, ಬಿಹಾರ ರಾಜ್ಯಗಳು ಮತ್ತೊಂದು ಆಪತ್ತು ಎದುರಿಸುತ್ತಿವೆ. ಲಕ್ಷಾಂತರ ಜನರ ಜೀವನವನ್ನು ಮಾನ್ಸೂನ್ ಮಳೆಯ ಪ್ರವಾಹ ಅಸ್ತವ್ಯಸ್ತಗೊಳಿಸಿದೆ. ವಿಶ್ವದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲೂಪ್ರವಾಹದ ನೀರಿನ ಮಟ್ಟವುವೇಗವಾಗಿ ಏರುತ್ತಿದೆ’ ಎಂದು ಪ್ರಿಯಾಂಕ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

‘ಅಸ್ಸಾಂ ಜನತೆಗೆ ನಮ್ಮೆಲ್ಲರ ಬೆಂಬಲ ಮತ್ತು ನೆರವು ಅಗತ್ಯವಿದೆ. ಕೆಲವು ವಿಶ್ವಾಸಾರ್ಹ ಸಂಘಟನೆಗಳು ಅಸ್ಸಾಂನಲ್ಲಿ ಅತ್ಯುತ್ತಮವಾಗಿ ಪ‍ರಿಹಾರ ಕಾರ್ಯಗಳನ್ನು ಕೈಗೊಂಡಿವೆ.ನಾನು ಮತ್ತು ಪತಿ ನಿಕ್‌ ಆ ಸಂಘಟನೆಗಳಿಗೆ ದೇಣಿಗೆ ನೀಡಿದ್ದೇವೆ. ಸಂತ್ರಸ್ತರಿಗೆ ಸಹಾಯ ಮಾಡಲು ನಾವೆಲ್ಲರೂ ಕೈಜೋಡಿಸೋಣ’ ಎಂದು ಪ್ರಿಯಾಂಕಾ ಮನವಿ ಮಾಡಿದ್ದಾರೆ.

ADVERTISEMENT

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಕೂಡ ಪ್ರವಾಹದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ದಂಪತಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದು, ‘ಅಸ್ಸಾಂ ಮತ್ತು ಬಿಹಾರದಲ್ಲಿ ಉಂಟಾಗಿರುವ ಪ್ರವಾಹವು ಜನಜೀವನ ಅಸ್ತವ್ಯಸ್ತಗೊಳಿಸಿದೆ. ಎರಡೂ ರಾಜ್ಯದ ಜನತೆಗೆ ನೆರವಿನ ಅಗತ್ಯವಿದೆ. ಈ ರಾಜ್ಯಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವ ಆ್ಯಕ್ಷನ್ ಏಡ್ ಇಂಡಿಯಾ, ರ‍್ಯಾಪಿಡ್ ರೆಸ್ಪಾನ್ಸ್ ಮತ್ತು ಗೂಂಜ್ ಸಂಘಟನೆಗಳಿಗೆ ಬೆಂಬಲ ನೀಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುವ ಪ್ರತಿಜ್ಞೆ ಮಾಡಿದ್ದೇವೆ. ದೇಶದ ನಾಗರಿಕರು ಎರಡು ರಾಜ್ಯಗಳ ಜನರಿಗೆ ನೆರವು ನೀಡಲು ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.