ADVERTISEMENT

ಜು. 3ಕ್ಕೆ ‘ಸೂಫಿಯುಂ ಸುಜಾತಯುಂ’ ಚಿತ್ರ ಒಟಿಟಿಯಲ್ಲಿ ಬಿಡುಗಡೆ

ಒಟಿಟಿಯಲಿ ಬಿಡುಗಡೆಯಾಗಲಿರುವ ಮೊದಲ ಮಲಯಾಳ ಸಿನಿಮಾ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 9:54 IST
Last Updated 24 ಜೂನ್ 2020, 9:54 IST
‘ಸೂಫಿಯುಂ ಸುಜಾತಯುಂ’ ಚಿತ್ರದ ಪೋಸ್ಟರ್‌
‘ಸೂಫಿಯುಂ ಸುಜಾತಯುಂ’ ಚಿತ್ರದ ಪೋಸ್ಟರ್‌   

ಅದಿತಿ ರಾವ್‌ ಹೈದರಿ ಮತ್ತು ಜಯಸೂರ್ಯ ನಟನೆಯ ಮಲಯಾಳದ ‘ಸೂಫಿಯುಂ ಸುಜಾತಯುಂ’ ಚಿತ್ರ ಜುಲೈ 3ರಂದು ಅಮೆಜಾನ್‌ ಪ್ರೇಮ್‌ನಲ್ಲಿ ಬಿಡುಗಡೆಯಾಗಲಿದೆ.

ಜ್ಯೋತಿಕಾ ನಟನೆಯ ತಮಿಳು ಚಿತ್ರ ‘ಪೊನ್ಮಗಲ್‌ ವಂದಲ್‌’ ಮತ್ತು ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್’ ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡ ಬಳಿಕ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಇದು.

ಸಂಗೀತ ಪ್ರಧಾನ ಪ್ರೇಮ ಕಥೆ ಹೊಂದಿರುವ ಈ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದೆ. ಅಂದಹಾಗೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಮಲಯಾಳ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ಮುಗ್ಧ ಹುಡುಗಿಯೊಬ್ಬಳು ಸೂಫಿಪಂಥದ ಆರಾಧಕನ ಪ್ರೀತಿಯ ಸೆಳೆತಕ್ಕೆ ಸಿಲುಕುತ್ತಾಳೆ. ಅದಕ್ಕೆ ಹಳ್ಳಿಗರು ಲವ್‌ ಜಿಹಾದ್‌ನ ಬಣ್ಣ ಕಟ್ಟುತ್ತಾರೆ. ಕೊನೆಗೆ ಆಕೆಯ ತಂದೆಯು ದುಬೈನ ಎನ್‌ಆರ್‌ಐ ಒಬ್ಬನಿಗೆ ಅವಳನ್ನು ಕೊಟ್ಟು ಮದುವೆ ಮಾಡುತ್ತಾರೆ. ಒಂದು ದಿನ ಆಕೆಗೆ ದೂರವಾಣಿ ಕರೆಯೊಂದು ಬರುತ್ತದೆ. ಆ ಕರೆಯು ಮತ್ತೆ ಅವಳನ್ನು ಹಳ್ಳಿಗೆ ಕರೆ ತರುವಂತೆ ಹೇಳುತ್ತದೆ. ಆಕೆ ಹುಟ್ಟಿದ ಊರಿಗೆ ಮರಳಿದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

‘ಈ ಚಿತ್ರ ನನ್ನ ವೃತ್ತಿಬದುಕಿನಲ್ಲಿಯೇ ವಿಶೇಷವಾದುದು. ಅಪರೂಪದ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ಕೊಟ್ಟಿದೆ. ಪೂರ್ವಗ್ರಹ ಮತ್ತು ತಾರತಮ್ಯದ ನಡುವೆ ಅರಳಿದ ಮುಗ್ಧ ಪ್ರೀತಿಯ ಕಥೆ ಇದು. ಭಾವುಕತೆಯ ಬಂಧದೊಳಗೆ ಚಿತ್ರಕಥೆಯ ನಿರೂಪಣೆ ಸಾಗಲಿದೆ’ ಎಂದು ಅದಿತಿ ಪ್ರತಿಕ್ರಿಯಿಸಿದ್ದಾರೆ.

ಚಿತ್ರದಲ್ಲಿ ಜಯಸೂರ್ಯ ಅವರು ಅದಿತಿ ರಾವ್‌ ಅವರ ಪತಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಸುಂದರ ಹುಡುಗಿಯೊಬ್ಬಳ ಅಪೂರ್ಣ ಪ್ರೇಮಕಥೆ ಇದಾಗಿದೆ. ಪತ್ನಿಯು ಬೇರೊಬ್ಬರನ್ನು ಪ್ರೀತಿಸಿರುವುದು ಆತನಿಗೂ ಗೊತ್ತಿರುತ್ತದೆ. ಆದರೆ, ತನ್ನ ಕುಟುಂಬವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಸವಾಲಿನ ಪಾತ್ರ ಆತನದು’ ಎಂದಿದ್ದಾರೆ.

ಅಂದಹಾಗೆ ಇದಕ್ಕೆ ನರಣ್ಣಿಪ್ಪುಳ ಶಾನವಾಸ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಹಿಂದೆ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಕೊರೊನಾ ಭೀತಿಯ ಪರಿಣಾಮ ಒಟಿಟಿಯಲ್ಲಿ ಬಿಡುಗಡೆಗೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.