ADVERTISEMENT

ಸಿನಿ ಸುದ್ದಿ | ಕಾದಂಬರಿ ಆಧಾರಿತ ‘ಸುಳಿ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 0:22 IST
Last Updated 15 ಸೆಪ್ಟೆಂಬರ್ 2025, 0:22 IST
ಚೈತ್ರಾ
ಚೈತ್ರಾ   

ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಸುಳಿ’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. 1970ರ ದಶಕದಲ್ಲಿ ಪ್ರಕಟವಾದ ತಮಿಳಿನ ಚಿನ್ನಪ್ಪ ಭಾರತಿ ಅವರ ‘ಪವಳಾಯಿ’ ಕಾದಂಬರಿ ಆಧಾರಿತ ಕಥೆ ಹೊಂದಿರುವ ಚಿತ್ರಕ್ಕೆ ಸಾಯಿರಶ್ಮಿ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಸಹಸ್ರಕೋಟಿ ಮೂವಿ ಎಂಟರ್‌ಟೈನ್ಮೆಂಟ್‌ ಬ್ಯಾನರಿನಲ್ಲಿ ಬೆಟ್ಟಸ್ವಾಮಿ ಗೌಡ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

‘ಇದೊಂದು ಸಾಮಾಜಿಕ ಕಥಾಹಂದರದ ಸಿನಿಮಾ. 1980ರ ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಅಣ್ಣಾವ್ರ ಪಾತ್ರದ ಮಾನವೀಯ ಮೌಲ್ಯ ಮತ್ತು ಪ್ರೀತಿಯ ಆಳದ ಬಗ್ಗೆ ಹೇಳುತ್ತಾ ನಮ್ಮ ಚಿತ್ರವು ತನ್ನ ಕಥೆಯೊಳಗೆ ನೋಡುಗರನ್ನು ಸೆಳೆದುಕೊಳ್ಳುತ್ತದೆ. ಹೆಣ್ಣಿನ ಅಂತರಂಗದ ಭಾವನೆಗಳು, ಸಾಮಾಜಿಕ ಮೌಲ್ಯಗಳು ಎಲ್ಲವನ್ನೂ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮಂಡ್ಯದ ಗ್ರಾಮೀಣ ಪರಿಸರದಲ್ಲಿ ನಡೆಯುವ ಕಥೆಯಿದು’ ಎಂದರು ನಿರ್ದೇಶಕಿ.

ಯುವನಟ ಸನತ್‌, ಚೈತ್ರಾ ಸಾಕೇಲ್, ಸಂಜನಾ ನಾಯ್ಡು, ಶಿವಕುಮಾರ್‌ ಆರಾಧ್ಯ, ಸೌಭಾಗ್ಯ, ಸಿದ್ಧು ಮಂಡ್ಯ, ಶಂಕರ ನಾರಾಯಣ, ಬೆಟ್ಟಸ್ವಾಮಿ ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ADVERTISEMENT

ಆಲಭುಜನಹಳ್ಳಿ, ನಗರಕೆರೆ, ಮಾಲಗಾರನಹಳ್ಳಿ, ಕೆ.ಎಂ. ದೊಡ್ಡಿ, ಮದ್ದೂರು ಮುಂತಾದೆಡೆ ಚಿತ್ರೀಕರಣಗೊಂಡಿದೆ. ಚಿತ್ರದ ಹಾಡುಗಳಿಗೆ ಎನ್‌.ರಾಜು ಸಂಗೀತ ಸಂಯೋಜಿಸಿದ್ದಾರೆ. ಅಕ್ಟೋಬರ್‌ ಅಂತ್ಯದೊಳಗೆ ಚಿತ್ರ ತೆರೆಗೆ ಬರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.