ADVERTISEMENT

ಅತಿಮಾನುಷ ನಾಯಕ ಪಾತ್ರಗಳಲ್ಲೇ ಹೆಚ್ಚು ಕ್ರೌರ್ಯ: ಅಧ್ಯಯನ ವರದಿ

ಪಿಟಿಐ
Published 4 ನವೆಂಬರ್ 2018, 14:14 IST
Last Updated 4 ನವೆಂಬರ್ 2018, 14:14 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಿಗಿಂತಲೂ ‘ಒಳ್ಳೆಯ ವ್ಯಕ್ತಿಗಳು’ ಎನಿಸಿಕೊಂಡ ಅತಿಮಾನುಷ ನಾಯಕರ (ಸೂಪರ್‌ ಹೀರೊ) ಪಾತ್ರಗಳಲ್ಲೇ ಹೆಚ್ಚು ಕ್ರೌರ್ಯವಿರುವುದು ಅಧ್ಯಯನದಿಂದ ಕಂಡುಬಂದಿದೆ. ಅಲ್ಲದೆ, ಇಂತಹ ಸೂಪರ್‌ ಹೀರೊ ಸಿನಿಮಾಗಳು ಯುವಜನರ ಮೇಲೆ ಹೆಚ್ಚು ನಕರಾತ್ಮಕ ಸಂದೇಶ ಬೀರುತ್ತಿವೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್‌ ಯೂನಿವರ್ಸಿಟಿಯ ಸಂಶೋಧಕರು, 2015 ಮತ್ತು 2016ರ ಅವಧಿಯಲ್ಲಿ ಬಿಡುಗಡೆಯಾದ ಅತಿಮಾನುಷ ನಾಯಕ ಪಾತ್ರಗಳನ್ನು ಆಧರಿಸಿದ 10 ಸಿನಿಮಾಗಳನ್ನು ವಿಶ್ಲೇಷಣೆ ನಡೆಸಿ ಈ ಅಧ್ಯಯನ ವರದಿ ಸಿದ್ಧಪಡಿಸಿದ್ದಾರೆ.

ಈ ಸಿನಿಮಾಗಳಲ್ಲಿ ಚಿತ್ರಿಸಲಾಗಿರುವ ಕ್ರೌರ್ಯದ ಬಗೆಗಳು ಮತ್ತು ನಿರ್ದಿಷ್ಟ ಸನ್ನಿವೇಶಗಳನ್ನು ಕ್ರೋಡೀಕರಿಸಿ, ಮುಖ್ಯ ಪಾತ್ರಗಳನ್ನು ಒಳ್ಳೆಯ ವ್ಯಕ್ತಿ ಅಥವಾ ದುಷ್ಟ ವ್ಯಕ್ತಿ ಎಂದು ವಿಂಗಡಿಸಿ ಇವು ವೀಕ್ಷಕರ ಮೇಲೆ ಉಂಟು ಮಾಡುವ ಪ್ರಭಾವ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸಂಶೋಧಕರು ಅಂದಾಜಿಸಿದ್ದಾರೆ.

ADVERTISEMENT

ಸಂಶೋಧಕರು ಹೋಲಿಕೆ ಮಾಡಿರುವ ಪ್ರಕಾರ, ಇಂತಹ ಸಿನಿಮಾಗಳಲ್ಲಿ ಒಂದು ಗಂಟೆ ಅವಧಿಯಲ್ಲಿ ಒಳ್ಳೆಯ ವ್ಯಕ್ತಿ ಎನಿಸಿಕೊಂಡ ಪಾತ್ರಗಳಿಂದ 23 ಬಾರಿ ಕ್ರೌರ್ಯ ನಡೆದರೆ, ದುಷ್ಟರು ಎನಿಸಿಕೊಂಡ ಪಾತ್ರಗಳಿಂದ 18 ಬಾರಿ ಕ್ರೌರ್ಯ ನಡೆದಿವೆ. ಅಲ್ಲದೆ, ಈ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳಿಂದ ಗಂಟೆಗೆ ಸರಾಸರಿ ಏಳು ಬಾರಿ ಕ್ರೌರ್ಯ ಬಿಂಬಿಸುವ ನಟನೆ ಮೂಡಿಬಂದರೆ, ಪುರುಷ ಪಾತ್ರಗಳಿಂದ ಐದುಪಟ್ಟು ಹೆಚ್ಚಿನ ಬಾರಿ ಕ್ರೌರ್ಯ ವಿಜೃಂಭಿಸುವ ನಟನೆ ಮೂಡಿಬಂದಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇಂತಹ ಚಲನಚಿತ್ರಗಳಲ್ಲಿ ಮುಖ್ಯಪಾತ್ರಗಳ ಪೈಕಿ ಒಳ್ಳೆಯ ವ್ಯಕ್ತಿ ನಡೆಸುವ ಕ್ರೌರ್ಯದಲ್ಲಿ 1,021 ಬಾರಿ ಹೊಡೆದಾಟ, 659 ಬಾರಿ ಮಾರಕ ಶಸ್ತ್ರಾಸ್ತ್ರ ಬಳಕೆ, 199 ಬಾರಿ ಆಸ್ತಿ ನಾಶ, 168 ಕೊಲೆ ಹಾಗೂ 144 ಬಾರಿ ಬೆದರಿಕೆ ಅಥವಾ ಚಿತ್ರಹಿಂಸೆ ನೀಡಿದ ಪ್ರಸಂಗಗಳು ಮೂಡಿವೆ.

ಅಲ್ಲದೆ, ದುಷ್ಟ ವ್ಯಕ್ತಿ ನಡೆಸುವ ಕ್ರೌರ್ಯದ ವೇಳೆ 604 ಬಾರಿ ಮಾರಕ ಶಸ್ತ್ರಾಸ್ತ್ರಗಳ ಬಳಕೆ, 599 ಬಾರಿ ಹೊಡೆದಾಟ, 237 ಬಾರಿ ಬೆದರಿಸಿದ ಅಥವಾ ಚಿತ್ರಹಿಂಸೆ ನೀಡಿದ, 191 ಬಾರಿ ಆಸ್ತಿ ನಾಶಗೊಳಿಸಿದ ಹಾಗೂ 93 ಕೊಲೆ ನಡೆಸಿದ ಸನ್ನಿವೇಶಗಳನ್ನು ಗುರುತಿಸಲಾಗಿದೆ.

‘ಮಕ್ಕಳು ಮತ್ತು ಹದಿಹರೆಯದವರು ಅತಿಮಾನುಷ ನಾಯಕ ಪಾತ್ರಗಳನ್ನು (ಸೂಪರ್‌ ಹೀರೊ) ಒಳ್ಳೆಯ ವ್ಯಕ್ತಿಗಳೆಂದು ನೋಡುತ್ತಾರೆ. ಬಹುಷಃ ಅವರು, ಇಂತಹ ಪಾತ್ರಗಳ ಪ್ರಭಾವಕ್ಕೆ ಒಳಗಾಗಿಯೇ ಬದುಕಿನಲ್ಲಿ ಕ್ರೌರ್ಯದಲ್ಲಿ ತೊಡಗುತ್ತಿದ್ದಾರೆ’ ಎಂದು ಪೆನ್ಸಿಲ್ವೇನಿಯಾ ಸ್ಟೇಟ್‌ ಯೂನಿವರ್ಸಿಟಿಯ ಪ್ರೊ.ರಾಬರ್ಟ್‌ ಒಲಿಂಪಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.