ADVERTISEMENT

ಫೇಲಾದ್ರೆ ಏನು, ಸಪ್ಲಿಮೆಂಟರಿ ಬರೀ ನೀನು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 9:22 IST
Last Updated 19 ಡಿಸೆಂಬರ್ 2018, 9:22 IST
ಶ್ರದ್ಧಾ ಭಟ್
ಶ್ರದ್ಧಾ ಭಟ್   

'ಯೋಚಿಸಬೇಡ, ಚಿಂತಿಸಬೇಡ, ಫೇಲಾದರೆ ಏನು ಸಪ್ಲಿಮೆಂಟರಿ ಬರಿ ನೀನು' ಇದೆಂತಾ ಡೈಲಾಗ್ ಹೊಡಿತಿದ್ದೀರಿ ಅನ್ನಬೇಡಿ. ಇದು ಡೈಲಾಗ್ ಅಲ್ಲ. 'ಸಪ್ಲಿಮೆಂಟರಿ' ಸಿನಿಮಾದ ಶೀರ್ಷಿಕೆ ಗೀತೆ.

ವಿದ್ಯಾರ್ಥಿ ಜೀವನದಲ್ಲಿ ಮತ್ತೆ ಮತ್ತೆ ಕೇಳುವ ಶಬ್ದ ಈ ಸಪ್ಲಿಮೆಂಟರಿ. ಹಲವರ ಪಾಲಿಗೆ ಇದು ಮರುಜೀವ ಪಡೆಯುವ ಅವಕಾಶ. ವಿದ್ಯಾರ್ಥಿ ಬದುಕಿನಲ್ಲಿ ಸೆಕೆಂಡ್‌ ಚಾನ್ಸ್‌ ಕೊಡುವ ‘ಸಪ್ಲಿಮೆಂಟರಿ’ಯನ್ನೇ ಶೀರ್ಷಿಕೆಯಾಗಿಸಿಕೊಂಡು ಒಂದು ಸಿನಿಮಾ ರೂಪಿಸಿದ್ದಾರೆ ದೇವರಾಜ್‌ ಎಸ್‌. ತುಮಕೂರು ವಿಶ್ವವಿದ್ಯಾಲಯದಲ್ಲಿ ಕೆಮೆಸ್ಟ್ರಿ ಪ್ರಾಧ್ಯಾಪಕರಾಗಿರುವ ದೇವರಾಜ್‌ ತಮಗೆ ತಿಳಿದಿರುವ ವಿದ್ಯಾರ್ಥಿ ಬದುಕಿನ ಬಯಾಲಾಜಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

‘ಸಪ್ಲಿಮೆಂಟರಿ ಎಂದರೆ ಸೆಕೆಂಡ್ ಚಾನ್ಸ್‌. ಬರೀ ಪರೀಕ್ಷೆ ಅಲ್ಲ; ಬದುಕಿನಲ್ಲಿಯೂ. ಆ ಸೆಕೆಂಡ್ ಚಾನ್ಸ್ ಸರಿಯಾಗಿ ಬಳಸಿಕೊಂಡರೆ ಸಾಧನೆ ಮಾಡಬಹುದು. ಗುರು ಶಿಷ್ಯ ಸಂಬಂಧದ ಕುರಿತು ಈ ಸಿನಿಮಾ ಮಾಡಿದ್ದೇನೆ. ಎದೆಯೊಳಗಿನ ತಮಟೆ ಅಥವಾ ನಯನಮನೋಹರ ಎಂಬ ಹೆಸರು ಇಟ್ಟುಕೊಂಡಿದ್ದೆ. ಆದರೆ ಚಂದ್ರಶೇಖರ ಬಂಡಿಯಪ್ಪ ಸಲಹೆಯಂತೆ ಸಪ್ಲಿಮೆಂಟರಿ ಎಂದು ಇಟ್ಟಿದ್ದೇವೆ’ ಎಂದರು ದೇವರಾಜ್‌. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ನಾಲ್ಕು ಹಾಡುಗಳ ರಾಗ ಸಂಯೋಜನೆಯನ್ನೂ ಅವರೇ ಮಾಡಿದ್ದಾರೆ.

ADVERTISEMENT

ಮಹೇಂದ್ರ ಮುನೋಟ್‌ ಅವರು ಈ ಚಿತ್ರಕ್ಕೆ ಹಣ ಹೂಡುವುದರ ಜತೆಗೆ ಒಂದು ಮುಖ್ಯಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಯೂ ಸಿನಿಮೀಯ ರೀತಿಯಲ್ಲಿಯೇ ಮಾತನಾಡಿದ ಅವರು, ‘ಸಿನಿಮಾದ ಉದ್ದೇಶ ಬರೀ ಮನೋರಂಜನೆ ಅಲ್ಲ. ಅದು ಪವಿತ್ರ ಕಲೆ. ನಂತರ ಮನರಂಜನೆ. ಆಮೇಲೆ ಸಂಪಾದನೆ. ’ಸಪ್ಲಿಮೆಂಟರಿ’ ಇದು ಒಂದು‌ ಸ್ಪೂರ್ತಿದಾಯಕ ಸಿನಿಮಾ. ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ದಾರಿದೀಪ. ಇದು ನನ್ನ ಚಿತ್ರಬದುಕಿಗೂ ಇದು ಸಪ್ಲಿಮೆಂಟರಿ’ ಎಂದರು.ರಶ್ಮಿ ಆರ್, ಸಂತೋಷ್ ಎಂ. ಮತ್ತು ಹೇಮಶೇಖರ್ ಕೂಡ ಮಹೇಂದ್ರ ಅವರ ಜತೆ ಹಣ ಹೂಡಿದ್ದಾರೆ.

ರಾಘವ ಸುಭಾಷ್ ಈ ಚಿತ್ರದ ಸಂಗೀತ ನಿರ್ದೇಶಕ. ಖುಷ್‌ ಮತ್ತು ಶ್ರದ್ಧಾ ಭಟ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

‘ಇದು ಎಕ್ಸಾಮ್ ಬಗ್ಗೆ ಇರುವ ಜೀವನ ಅಲ್ಲ. ಪ್ರತಿ ಮನುಷ್ಯನ ಜೀವನದಲ್ಲೂ ವೈಫಲ್ಯಗಳು ಇರುತ್ತವೆ. ಆ ವೈಫಲ್ಯಗಳನ್ನು ಪಾಸಿಟಿವ್‌ ಆಗಿ ತಗೊಳ್ಳೂದು ಹೇಗೆ ಎಂದು ತೋರಿಸಿದ್ದೇವೆ’ ಎಂದರು ಖುಷ್‌. ‘ಇದು ನನ್ನ ಎರಡನೇ ಸಿನಿಮಾ. ಹದಿಹರೆಯದಿಂದ ಹಿಡಿದು ಮೂವತ್ತೈದು ವರ್ಷದವರೆಗಿನ ಬದಲಾವಣೆಗಳನ್ನು ಈ ಚಿತ್ರದಲ್ಲಿನ ನನ್ನ ಪಾತ್ರ ಬಿಂಬಿಸುತ್ತದೆ’ ಎಂದರು ನಾಯಕಿ ಶ್ರದ್ಧಾ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.