ADVERTISEMENT

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ; ರಿಯಾ ಅರ್ಜಿ ವಿಚಾರಣೆ

ಪಿಟಿಐ
Published 5 ಆಗಸ್ಟ್ 2020, 12:16 IST
Last Updated 5 ಆಗಸ್ಟ್ 2020, 12:16 IST
ಸುಶಾಂತ್‌ ಸಿಂಗ್‌ ರಜಪೂತ್‌
ಸುಶಾಂತ್‌ ಸಿಂಗ್‌ ರಜಪೂತ್‌   

ನವದೆಹಲಿ: ನಟ ಸುಶಾಂತ್‌ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬಿಹಾರ ಸರ್ಕಾರದ ಶಿಫಾರಸನ್ನು ಒಪ್ಪಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ರಿಯಾ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಶ್‌ ರಾಯ್‌ ಅವರಿದ್ದ ಪೀಠ, ‘ಸುಶಾಂತ್‌ ಸಿಂಗ್‌ ಸಾವಿನ ಸತ್ಯವು ಬಹಿರಂಗವಾಗಬೇಕು’ ಎಂದು ಹೇಳಿದೆ.

ADVERTISEMENT

ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮೂರು ದಿನಗಳೊಳಗೆ ಅಭಿಪ್ರಾಯ ತಿಳಿಸುವಂತೆ ಸುಶಾಂತ್‌ ಅವರ ತಂದೆ ಕೃಷ್ಣ ಕಿಶೋರ್‌ ಸಿಂಗ್‌, ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿತು. ಸುಶಾಂತ್‌ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿ ಕುರಿತ ವರದಿಯನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಪೊಲೀಸ್‌ಗೆ ಸೂಚಿಸಿತು.

ಇದೇ ವೇಳೆ ತನಿಖಾ ತಂಡದ ಮೇಲುಸ್ತುವಾರಿ ವಹಿಸಲು ಮುಂಬೈಗೆ ಬಂದಿದ್ದ ಬಿಹಾರದ ಪೊಲೀಸ್‌ ಅಧಿಕಾರಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು ಸರಿಯಾದ ಕ್ರಮವಲ್ಲ ಎಂದೂ ಪೀಠವು ಅಭಿಪ್ರಾಯಪಟ್ಟಿತು.

‘ಮಹಾರಾಷ್ಟ್ರ ಪೊಲೀಸರು ದಕ್ಷತೆ ಹಾಗೂ ನಿಷ್ಪಕ್ಷಪಾತದಿಂದ ತನಿಖೆ ನಡೆಸುತ್ತಿದ್ದಾರೆ. ಹೀಗಿದ್ದರೂ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಆರ್‌‌.ಬಸಂತ್‌ ಅವರು ಹೇಳಿದರು.

ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೀಠವು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.