ADVERTISEMENT

ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ: ಶಂಕಿತ ಆರೋಪಿ ವಶಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2025, 11:36 IST
Last Updated 18 ಜನವರಿ 2025, 11:36 IST
ಸೈಫ್ ಅಲಿ ಖಾನ್‌
ಸೈಫ್ ಅಲಿ ಖಾನ್‌   

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಶಂಕಿತನನ್ನು ಛತ್ತೀಸಗಢದ ದುರ್ಗ್‌ನಲ್ಲಿ ರೈಲಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಶಂಕಿತನನ್ನು ಆಕಾಶ್‌ ಕೈಲಾಶ್‌ ಕನೋಜಿಯಾ (31) ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ ರೈಲ್ವೆ ಸುರಕ್ಷತಾ ಪಡೆಯು (ಆರ್‌ಪಿಎಫ್‌)  ಈತನನ್ನು ವಶಕ್ಕೆ ಪಡೆದಿದೆ. ಶಂಕಿತನನ್ನು  ಟ್ರಾನ್ಸಿಟ್ ರಿಮ್ಯಾಂಡ್ ಅಡಿಯಲ್ಲಿ ವಶಕ್ಕೆ ಪಡೆಯಲು ಮುಂಬೈ ಪೊಲೀಸರ ತಂಡವು ನೆರೆಯ ರಾಜ್ಯಕ್ಕೆ ತೆರಳಿದೆ.

ಮುಂಬೈನ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ಶಾಲಿಮಾರ್ ಕೋಲ್ಕತ್ತ ನಿಲ್ದಾಣದ ನಡುವೆ ಸಂಚರಿಸುವ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಂಕಿತ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ADVERTISEMENT

ಮುಂಬೈ ಪೊಲೀಸರು ಶಂಕಿತನ ಫೋಟೊವನ್ನು ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳ  ಠಾಣೆಗಳಿಗೆ ಕಳುಹಿಸಿದ್ದರು. ರಾಜನಂದಗಾಂವ್‌ ರೈಲು ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಶಂಕಿತ ಪತ್ತೆಯಾಗಿರಲಿಲ್ಲ. ದುರ್ಗ್‌ ನಿಲ್ದಾಣಕ್ಕೆ ಬಂದ ನಂತರ ವಿವಿಧ ತಂಡಗಳು ಪರಿಶೀಲಿಸಿದಾಗ ರೈಲಿನ ಸಾಮಾನ್ಯ ಬೋಗಿಯಲ್ಲಿ ಪತ್ತೆಯಾಗಿದ್ದಾನೆ. ನಂತರ ಆರ್‌ಪಿಎಫ್‌ ತಂಡವು ಮುಂಬೈ ಪೊಲೀಸರಿಗೆ ಆತನ ಫೋಟೊವನ್ನು ಕಳುಹಿಸಿತ್ತು. ಅವರು ಆತನ ಗುರುತನ್ನು ಖಚಿತಪಡಿಸಿದರು.

ಗುರುವಾರ ಮುಂಜಾನೆ ಸೈಫ್‌ ಅಲಿ ಖಾನ್‌ ಅವರ ಮುಂಬೈನಲ್ಲಿರುವ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ಸೈಫ್‌ ಅಲಿ ಖಾನ್‌ ಅವರು, ಲೀಲಾವತಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯ ಅವರು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.