ADVERTISEMENT

ಸುವ್ವಾಲಿ: ಸಾಹಸದ ಕಥೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ಹಾರ್ದಿಕಾ
ಹಾರ್ದಿಕಾ   

ಶ್ರೀರಾಮ್ ಬಾಬು ಅವರು ಕಳೆದ ಹದಿನೇಳು ವರ್ಷಗಳಿಂದ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸುದ್ದಿಯಂತೂ ಅಲ್ಲ. ಈಗಿನ ಸುದ್ದಿ ಏನಪ್ಪಾ ಅಂದರೆ, ಅನಾಥಾಲಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಅವರು ಒಂದು ಸಿನಿಮಾ ಮಾಡಿದ್ದಾರೆ.

ಚಿತ್ರಕ್ಕೆ ಅವರು ‘ಸುವ್ವಾಲಿ’ ಎಂಬ ಹೆಸರು ಇತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಬೆಂಗಳೂರಿನಲ್ಲಿ ನಡೆಯಿತು. ಲಹರಿ ಆಡಿಯೊ ಕಂಪನಿಯ ಮುಖ್ಯಸ್ಥ ಲಹರಿ ವೇಲು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಿಂದಿನ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮಕ್ಕೆ ಬಂದಿದ್ದರು.

ಈಗ ಪಿಯುಸಿ ಓದುತ್ತಿರುವ ಹಾರ್ದಿಕಾ ಈ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳಿದ್ದಾರೆ. ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಲೋಕಿ ಸಂಗೀತ ನೀಡಿದ್ದಾರೆ. ಶ್ರೀರಾಮ್‌ ಬಾಬು ಅವರು ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ADVERTISEMENT

ಚಿತ್ರದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮ್‌, ‘ಅನಾಥಾಶ್ರಮದಲ್ಲಿ ನಡೆಯುವ ಘಟನೆಗಳು, ಅಲ್ಲಿನ ಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವುದು ಚಿತ್ರದಲ್ಲಿ ಇದೆ. ಈ ಮಕ್ಕಳಿಗೆ ಚಿತ್ರದಲ್ಲಿ ಪ್ರಧಾನಿ ಭೇಟಿಯ ಅವಕಾಶ ಸಿಗುತ್ತದೆಯೇ, ಇಲ್ಲವೇ ಎಂಬುದೂ ಚಿತ್ರದಲ್ಲಿ ಇದೆ’ ಎಂದರು.

27 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಅದರಲ್ಲಿ 21 ದಿನಗಳ ಚಿತ್ರೀಕರಣ ರಾತ್ರಿ ವೇಳೆಯಲ್ಲಿ ನಡೆದಿದೆಯಂತೆ. ‘ಒಂದಷ್ಟು ಅನಾಥಾಲಯದ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಕೆಲವರು ನೀಡಿದ ಭರವಸೆ ನಂಬಿ ಆರು ಮಕ್ಕಳು ಅನಾಥಾಲಯದಿಂದ ಹೊರಬಂದಾಗ ವಾಸ್ತವದ ಅರಿವು ಅವರಿಗಾಗುತ್ತದೆ. ಅನಾಥಾಲಯವೇ ಲೇಸು ಎಂದು ವಾಪಸ್ ಹೊರಡುವಾಗ ಒಂದು ಭಾಷಣ ಕೇಳಿ, ನೇರವಾಗಿ ಪ್ರಧಾನಿಯನ್ನೇ ಭೇಟಿ ಮಾಡೋಣ ಎಂದು ನಿರ್ಧರಿಸುತ್ತಾರೆ’ ಎಂದು ಚಿತ್ರದ ಕಥೆಯ ಎಳೆ ವಿವರಿಸಿದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಮೇಘನ ಕುಲಕರ್ಣಿ ಹಾಡುಗಳಿಗೆ ದನಿ ನೀಡಿದ್ದಾರೆ. ನಿರ್ದೇಶಕಿ ಹಾರ್ದಿಕಾ ಅವರು ಈ ಹಿಂದೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಹೊಂದಿದ್ದಾರೆ. ಇದು ಅವರ ಮೊದಲ ಸಿನಿಮಾ ನಿರ್ದೇಶನ.

‘ಸುವ್ವಾಲಿ ಎನ್ನುವ ಹೆಸರೇ ತುಂಬಾ ಚೆನ್ನಾಗಿದೆ. ಪಿಯುಸಿ ಓದುತ್ತಿರುವ ಹೆಣ್ಣುಮಗಳು ಈ ಚಿತ್ರವನ್ನು ನಿರ್ದೇಶನ ಮಾಡಿರುವುದನ್ನು ಮೆಚ್ಚಬೇಕು’ ಎಂದರು ಸಾ.ರಾ.ಗೋವಿಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.