ADVERTISEMENT

ಇದು ಹೊಸ ಬಗೆಯ ಸಿನಿಮಾ ಕಾಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:30 IST
Last Updated 13 ಜೂನ್ 2019, 19:30 IST
ಅನುರಾಗ್‌ ಕಶ್ಯಪ್‌ ಮತ್ತು ಅಶ್ವಿನ್‌ ಶರವಣನ್‌ ಜತೆಗೆ ತಾಪ್ಸಿ ಪನ್ನು
ಅನುರಾಗ್‌ ಕಶ್ಯಪ್‌ ಮತ್ತು ಅಶ್ವಿನ್‌ ಶರವಣನ್‌ ಜತೆಗೆ ತಾಪ್ಸಿ ಪನ್ನು   

ಬೇಬಿ, ಪಿಂಕ್‌, ಬದ್ಲಾದಂತಹ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ನಟಿ ತಾಪ್ಸಿ ಪನ್ನು, ಹೊಸ ಬಗೆಯ ವಾಣಿಜ್ಯ ಚಿತ್ರಗಳ ನಿರ್ಮಾಣಕ್ಕೆ ಇದು ತಕ್ಕ ಸಮಯ ಎಂಬ ಭರವಸೆಯಲ್ಲಿದ್ದಾರೆ.

ಬದ್ಲಾ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 130 ಕೋಟಿ ರೂಪಾಯಿ ಸಂಗ್ರಹ ಮಾಡಿರುವುದನ್ನು ಉದಾಹರಣೆಯಾಗಿ ಕೊಡುವ ಅವರು, ಸಾಂಪ್ರದಾಯಿಕ ಶೈಲಿಯ ವಾಣಿಜ್ಯ ಸಿನಿಮಾಗಳ ಗುಂಗಿನಿಂದ ಪ್ರೇಕ್ಷಕರು ಬಹುದೂರ ಬಂದಿದ್ದಾರೆ ಎನ್ನುವುದರ ದ್ಯೋತಕ ಎಂದು ಹೇಳುತ್ತಾರೆ.

‘ಬದ್ಲಾ ಚಿತ್ರದ ಬಳಿಕ ಹಲವು ಬದಲಾವಣೆಗಳು ನಡೆದಿವೆ. ಈ ಹಿಂದೆ ಬಂದ ವಾಣಿಜ್ಯ ಚಿತ್ರಗಳಿಗಿಂತ ಭಿನ್ನ ಹಾದಿಯಲ್ಲಿ ನಿರ್ಮಿಸಿದ ಚಿತ್ರಗಳನ್ನು ಪ್ರೇಕ್ಷಕರು ಸ್ವೀಕರಿಸಲು ಈಗ ಸಜ್ಜಾಗಿದ್ದಾರೆ. ವಾಣಿಜ್ಯ ಸಿನಿಮಾ ವೀಕ್ಷಿಸಲು ಥಿಯೇಟರ್‌ನಲ್ಲಿ ಕುಳಿತಾಗ ಮಿದುಳಿಗೇನೂ ಕೆಲಸವಿಲ್ಲ ಎಂಬ ರೂಢಿಗತ ಅಭಿಪ್ರಾಯ ದೂರವಾಗುವ ದಿನಗಳು ಬಂದಿವೆ ಎಂದು ತಾಪ್ಸಿ ಅಭಿಪ್ರಾಯಪಡುತ್ತಾರೆ.

ADVERTISEMENT

ಭಿನ್ನ ಪಾತ್ರಗಳಿಗೆ ಹೆಸರಾಗಿರುವ 31ರ ಹರೆಯದ ಈ ನಟಿ, ವಾಣಿಜ್ಯ ಚಿತ್ರಗಳಿಗೆ ಹೊಸದೊಂದು ವ್ಯಾಖ್ಯಾನ ನೀಡುತ್ತಾರೆ. ‘ಎರಡು ಗಂಟೆಗಳ ಕಾಲ ಸ್ಕ್ರೀನ್‌ ಮೇಲೆ ಗಮನ ಇರುವಂತೆ ನೋಡಿಕೊಳ್ಳಲು ಸಿದ್ಧ ಮಾದರಿಗಳೆನಿಸಿದ ಕಾಮಿಡಿ, ಹಾಡು ಮತ್ತು ನೃತ್ಯಗಳು ಸಿನಿಮಾಕ್ಕೆ ಬೇಕೇಬೇಕು ಎಂದೇನಿಲ್ಲ. ಆದರೆ, ಸಿನಿಮಾ, ಪ್ರೇಕ್ಷಕನಿಗೆ ಮನರಂಜನೆಯನ್ನು ನೀಡಬೇಕಷ್ಟೇ’ ಎಂದು ವಿಶ್ಲೇಷಿಸುತ್ತಾರೆ.

‘ಎರಡು ಗಂಟೆಗಳವರೆಗೆ ಪ್ರೇಕ್ಷಕನನ್ನು ಸಿನಿಮಾ ಎಂಗೇಜ್‌ ಆಗಿಡಬೇಕು. ಯಾವುದೇ ಕಾರಣಕ್ಕೂ ಬೋರ್‌ ಹೊಡಿಸುವಂತೆ ಇರಬಾರದು. ಬಯಸಿಬಂದ ಮನರಂಜನೆ ಆತನಿಗೆ ಸಿಗಬೇಕು. ಇಂತಹ ಗುಣವುಳ್ಳದ್ದೇ ಹೊಸ ಯುಗದ ವಾಣಿಜ್ಯ ಸಿನಿಮಾ’ ಎಂದು ವ್ಯಾಖ್ಯಾನ ನೀಡುತ್ತಾರೆ.

ತಾಪ್ಸಿ ಈಗ ತಮ್ಮ ಹೊಸ ಚಿತ್ರ ‘ಗೇಮ್‌ ಓವರ್‌’ನ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದಲ್ಲಿ ಸ್ವಪ್ನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ನಟಿ. ಈ ಸಿನಿಮಾ ಒಂದು ರೋಚಕ ಥ್ರಿಲ್ಲರ್‌ ಎಂದೆನ್ನುವ ಆಕೆ, ಕಥೆಯ ಕುರಿತು ಹೆಚ್ಚಿನ ಗುಟ್ಟು ಬಿಟ್ಟು ಕೊಡುವುದಿಲ್ಲ. ‘ಗೇಮ್‌ ಓವರ್‌’ ಚಿತ್ರ ಮಹಿಳೆಯ ಪರ ಧ್ವನಿ ಎತ್ತುತ್ತದಂತೆ.

ಕಥೆ ಭಿನ್ನವಾಗಿದ್ದರೆ ಪ್ರೇಕ್ಷಕರು ಅಂತಹ ಚಿತ್ರವನ್ನು ಮುಕ್ತ ಮನಸ್ಸಿನಿಂದ ಅಪ್ಪಿಕೊಳ್ಳುತ್ತಾರೆ. ಅವರಿಗೆ ಏನೋ ಹೊಸತು ಸಿಗುತ್ತದೆ ಎಂದಾದರೆ ಅಂತಹ ಚಿತ್ರಗಳಿಗೆ ಖಂಡಿತಾ ಅವಕಾಶ ಕೊಡುತ್ತಾರೆ ಎಂದು ಹೇಳುತ್ತಾರೆ ತಾಪ್ಸಿ. ಆಶ್ವಿನ್‌ ಸರವಣನ್‌ ಅವರ ನಿರ್ದೇಶನದ ಗೇಮ್‌ ಓವರ್‌ ಚಿತ್ರ ಇದೇ 15ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.