ADVERTISEMENT

ತಮಿಳಿನಲ್ಲೂ ಟಗರು ಗುಟುರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:46 IST
Last Updated 26 ಅಕ್ಟೋಬರ್ 2018, 13:46 IST
ರಿಮೇಕ್ ಹಕ್ಕು ಪತ್ರ ಮುತ್ತಯ್ಯ ಅವರಿಗೆ ಹಸ್ತಾಂತರಿಸಿದ ನಿರ್ದೇಶಕ ಸೂರಿ
ರಿಮೇಕ್ ಹಕ್ಕು ಪತ್ರ ಮುತ್ತಯ್ಯ ಅವರಿಗೆ ಹಸ್ತಾಂತರಿಸಿದ ನಿರ್ದೇಶಕ ಸೂರಿ   

ಟಗರು ಬಂತು ಟಗರು... ಎಂದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದಲ್ಲೇ ಗುಟುರು ಹಾಕಿದ್ದ ಸಿನಿಮಾ‘ಟಗರು’. ಇನ್ನೂ ಕೆಲವಡೆ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರದಲ್ಲಿ, ಅಭಿನಯದ ಮೂಲಕವೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಹ ಸಖತ್ ಆಗಿಯೇ ಗುಟುರು ಹಾಕಿದ್ದರು. ಇದೇ ಸಿನಿಮಾವೀಗ ತಮಿಳುನಲ್ಲೂ ಗುಟುರು ಹಾಕಲಿದೆ.

ಹೌದು, 25 ವಾರಗಳನ್ನು ಪೂರೈಸಿರುವ ಈ ಸಿನಿಮಾವು ತಮಿಳಿಗೆ ರಿಮೇಕ್ ಆಗುತ್ತಿದ್ದು, ತಮಿಳಿನ ಸ್ಟಾರ್ ಡೈರೆಕ್ಟರ್ ಮುತ್ತಯ್ಯ ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಅಲ್ಲದೇ,ವಿಜಯ ದೇವರಕೊಂಡ ಅಭಿನಯದ ‘ನೋಟಾ’ ಚಿತ್ರದ ನಿರ್ಮಾಪಕ ಜ್ಞಾನವೇಲ್ ಅವರು ಚಿತ್ರಕ್ಕೆ ಹಣಹೂಡಲಿದ್ದು, ಸೂರಿ ತಂಡದಿಂದ ಚಿತ್ರದ ರಿಮೇಕ್ ಹಕ್ಕನ್ನು ಅವರು ಖರೀದಿಸಿದ್ದಾರೆ.

ಈ ಕುರಿತು ನಿಮಾರ್ಪಕ ಕೆ.ಪಿ.ಶ್ರೀಕಾಂತ್, ‘ತಮಿಳಿನಲ್ಲಿ ‘ಕೊಂಬನ್’ ಚಿತ್ರ ನಿರ್ದೇಶನ ಮಾಡಿದ್ದ ಮುತ್ತಯ್ಯ ‘ಟಗರು’ ಚಿತ್ರದ ರಿಮೇಕ್ ಹಕ್ಕು ಪಡೆದಿದ್ದಾರೆ. ಜೈ ಟಗರು. ಮೈಯಲ್ಲಾ ಪೊಗರು’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ರಿಮೇಕ್ ಹಕ್ಕು ಖರೀದಿಸಿರುವ ಮುತ್ತಯ್ಯ, ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳಿಗೆ ಚಾಲನೆ ನೀಡಿದ್ದಾರಂತೆ. ಹಕ್ಕು ಖರೀದಿ ಬಗ್ಗೆ ಈ ಹಿಂದೆಯೇ ಮಾತುಕತೆಯಾಗಿತ್ತು. ಚಿತ್ರದ ಕೆಲಸಗಳಲ್ಲಿ ಆ ತಂಡವೂ ತೊಡಗಿಸಿಕೊಂಡಿದೆ. ಇದೀಗ ಅಧಿಕೃತವಾಗಿ ರಿಮೇಕ್ ರೈಟ್ಸ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡದ ‘ಟಗುರು’ನಲ್ಲಿ ಶಿವಣ್ಣ ಖಡಕ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಅವರಿಗೆ ಜೋಡಿಯಾಗಿ ಭಾವನಾ ನಟಿಸಿದ್ದರು. ಭಾವನಾ ತಂಗಿಯ ಪಾತ್ರಕ್ಕೆ ಮಾನ್ವಿತಾ ಹರೀಶ್ ಜೀವ ತುಂಬಿದ್ದರು. ಡಾಲಿಯಾಗಿ ನಟ ಧನಂಜಯ್ ಹಾಗೂ ಚಿಟ್ಟೆಯಾಗಿ ವಶಿಷ್ಠ ಸಿಂಹ ಮಿಂಚಿದ್ರು. ಈ ಚಿತ್ರದ ಒಂದೊಂದು ಪಾತ್ರವು ಮಹತ್ವದ್ದು.

ಶಿವಣ್ಣನ ಪಾತ್ರವನ್ನು ತಮಿಳಿನಲ್ಲಿಕಾರ್ತಿ ಅಥವಾ ವಿಜಯ್ ಸೇತುಪತಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾರ್ತಿ ಆಯ್ಕೆ ಬಹುತೇಕ ಅಂತಿಮಗೊಂಡಿದೆ ಎಂಬ ಗಾಳಿಮಾತು ಇದೆ. ಇನ್ನು ಕೆಲ ದಿನಗಳಲ್ಲಿ ಆ ಚಿತ್ರದ ಮುಹೂರ್ತ ನೆರವೇರಲಿದ್ದು, ‘ಟಗರು’ ತಂಡಕ್ಕೆ ನಿರ್ದೇಶಕ ಮುತ್ತಯ್ಯ ಆಹ್ವಾನ ನೀಡಿದ್ದಾರಂತೆ. ಶಿವರಾಜ್‌ಕುಮಾರ್, ಸೂರಿ, ಶ್ರೀಕಾಂತ್ ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ನಿರ್ದೇಶನದ ಮೂಲಕವೇ ಸದ್ದು ಮಾಡುವ ಮುತ್ತಯ್ಯ ಈ ಹಿಂದೆ ಕುಟ್ಟಿ ಪುಲಿ, ಕೊಂಬನ್, ಮರುಡು, ಕೋಡಿವೀರನ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಸದ್ಯ ಅವರು ‘ದೇವರಾಟಂ’ ಚಿತ್ರದ ನಿರ್ದೇಶನದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.