ADVERTISEMENT

ಜೂಜಾಟ: ‘ತನನಂ ತನನಂ’ ಚಿತ್ರದ ಖ್ಯಾತಿಯ ನಟ ಶ್ಯಾಮ್‌ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 9:29 IST
Last Updated 28 ಜುಲೈ 2020, 9:29 IST
ಶ್ಯಾಮ್‌
ಶ್ಯಾಮ್‌   

ಬಹುಭಾಷಾ ನಟ ಶ್ಯಾಮ್‌ ಸೇರಿದಂತೆ 13 ಮಂದಿಯನ್ನು ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಯಾರು ಈ ಶ್ಯಾಮ್‌ ಎಂಬ ಪ್ರಶ್ನೆ ಕಾಡುವುದು ಸಹಜ. 2006ರಲ್ಲಿ ಕವಿತಾ ಲಂಕೇಶ್‌ ನಿರ್ದೇಶಿಸಿದ್ದ ‘ತನನಂ ತನನಂ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದವರೇ ಶ್ಯಾಮ್‌. ಇದರಲ್ಲಿ ರಕ್ಷಿತಾ ಮತ್ತು ರಮ್ಯಾ ನಾಯಕಿಯಾಗಿದ್ದರು. ಯಶ್‌ ನಾಯಕರಾಗಿದ್ದ ‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರದಲ್ಲೂ ಶ್ಯಾಮ್ ಬಣ್ಣ ಹಚ್ಚಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಚೆನ್ನೈನ ನುಗಂಬಕ್ಕಂ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ್ದಾರೆ. ಅಂದಹಾಗೆ ಈ ಅಪಾರ್ಟ್‌ಮೆಂಟ್‌ ಶ್ಯಾಮ್‌ ಅವರಿಗೆ ಸೇರಿದೆ.

ಗೇಮ್‌ ಬೋರ್ಡ್‌, ಟೋಕನ್ಸ್‌ ಸೇರಿದಂತೆ ಲಕ್ಷಾಂತರ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾಕ್‌ಡೌನ್‌ ಜಾರಿಗೊಂಡ ಆರಂಭದ ದಿನಗಳಿಂದಲೇ ಈ ಅಪಾರ್ಟ್‌ಮೆಂಟ್‌ ಜೂಜಾಟದ ಅಡ್ಡೆಯಾಗಿತ್ತಂತೆ. ರಾತ್ರಿ 11ರಿಂದ ಬೆಳಿಗ್ಗೆ 4ಗಂಟೆವರೆಗೂ ಜೂಜಾಟ ನಡೆಯುತ್ತಿತ್ತು. ಠಾಣಾ ಜಾಮೀನಿನ ಮೇರೆಗೆ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

2001ರಲ್ಲಿ ಶ್ಯಾಮ್‌ ‘12ಬಿ’ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ‍್ರವೇಶಿಸಿದ್ದರು. ವೆಂಕಟ್‌ಪ್ರಭು ನಿರ್ದೇಶನದ ತಮಿಳಿನ ‘ಪಾರ್ಟಿ’ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯ ಹಂತದಲ್ಲಿದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡು ನಿರಾಶೆ ಅನುಭವಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಜೊತೆಗೆ, ₹ 20 ಸಾವಿರ ಕಳೆದುಕೊಂಡ ಯುವಕ ಕೂಡ ಆತ್ಮಹತ್ಯೆಗೆ ಶರಣಾಗಿದ್ದ.

ಈ ಪ್ರಕರಣಗಳ ಬೆನ್ನಲ್ಲೆ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠವು ಆನ್‌ಲೈನ್‌ ಗೇಮಿಂಗ್‌ ನಿಯಂತ್ರಿಸಲು ಪೊಲೀಸರಿಗೆ ಸೂಚಿಸಿತ್ತು. ಜೂಜಾಟ ಮತ್ತು ಆನ್‌ಲೈನ್‌ ಗೇಮಿಂಗ್‌ನಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ಈ ಕುರಿತು ತಮಿಳುನಾಡು ವಿಧಾನಸಭೆ ಮಧ್ಯಪ್ರವೇಶಿಸಿ ಸೂಕ್ತ ಪರಿಹಾರ ಹುಡುಕಲು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.