
ಚೆನ್ನೈ: ದೊಡ್ಡ ಬಜೆಟ್ ಸಿನಿಮಾಗಳು ಆದಾಯ ಹಂಚಿಕೆ ಆಧಾರದಲ್ಲಿ ನಿರ್ಮಾಣವಾಗಬೇಕು. ಚಿತ್ರದ ಲಾಭ, ನಷ್ಟಗಳೆರಡೂ ನಟರು ಹಾಗೂ ತಂತ್ರಜ್ಞರ ನಡುವೆ ಹಂಚಿಕೆಯಾಗಬೇಕು ಎಂದು ತಮಿಳು ಚಿತ್ರ ನಿರ್ಮಾಪಕರ ಸಂಘವು (ಟಿಎಫ್‌ಟಿಸಿ) ಭಾನುವಾರ ನಿರ್ಧರಿಸಿದೆ.
ಚೆನ್ನೈನಲ್ಲಿ ನಡೆದ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಅದು ಪ್ರಕಟಣೆ ಹೊರಡಿಸಿದೆ.
ಚಿತ್ರಮಂದಿರಗಳಿಂದ ಬರುವ ಆದಾಯ ಕಡಿಮೆಯಾಗುತ್ತಿದೆ. ಒಟಿಟಿ (ಓವರ್ ದಿ ಟಾಪ್) ಹಾಗೂ ಸ್ಯಾಟ್‌ಲೈಟ್ ವ್ಯವಹಾರಗಳಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ಪರಿಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಚಿತ್ರಮಂದಿರಗಳಿಂದ ಬರುವ ಆದಾಯವನ್ನು ಕಾಪಾಡಿಕೊಳ್ಳಲು ಒಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಕಾಲಾವಧಿಯನ್ನು ನಿಗದಿಪಡಿಸಲೂ ನಿರ್ಧರಿಸಲಾಗಿದೆ.
ಖ್ಯಾತ ನಟ–ನಟಿಯರು ನಟಿಸಿರುವ ಸಿನಿಮಾಗಳು ಬಿಡುಗಡೆಯಾದ 8 ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಬೇಕು. ಹಾಗೆಯೇ, ಸಾಧಾರಣ ಜನಪ್ರಿಯತೆ ಇರುವ ನಟ–ನಟಿಯರ ಸಿನಿಮಾಗಳು ತೆರೆಕಂಡ 6 ವಾರಗಳ ನಂತರ ಹಾಗೂ ಕಡಿಮೆ ಬಜೆಟ್ ಸಿನಿಮಾಗಳನ್ನು ಬಿಡುಗಡೆಯಾದ 4 ವಾರಗಳ ನಂತರ ಒಟಿಟಿಯಲ್ಲಿ ಪ್ರಸಾರ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.