ADVERTISEMENT

ಪ್ರಣಯಿನಿಯ ವಿರಹಾಲಾಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 16:12 IST
Last Updated 1 ನವೆಂಬರ್ 2018, 16:12 IST
‘ಸೂಜಿದಾರ’ ಸಿನಿಮಾದಲ್ಲಿ ಹರಿಪ್ರಿಯಾ
‘ಸೂಜಿದಾರ’ ಸಿನಿಮಾದಲ್ಲಿ ಹರಿಪ್ರಿಯಾ   

ಪುಟ್ಟ ಬಾಲ್ಕನಿ. ಕಾಟನ್‌ ಸೀರೆ, ಹಿಂಬದಿಗೆ ಗುಂಡಿಯಿರುವ ಕುಬುಸ, ಕತ್ತಿನಂಚಿಗೆ ತುಟಿ ಒತ್ತಬೇಕೆಂಬಂತೆಯೇ ಬಿನ್ನಾಣದಿಂದ ನಿಂತ ಚೆಲುವೆ. ಕೂದಲಿನಿಂದ ಸಿಕ್ಕುಬಿಡಿಸುತ್ತಿದ್ದಾಳೆ.

ಪ್ರೇಮದ ಗುರುತನೊತ್ತಿ, ಪ್ರೇಮಿಯೊಳಗೊಂದಾಗುವ ತವಕ, ಪ್ರಿಕಯಕರನಿಲ್ಲದ ವಿರಹಕ್ಕೆ ಸಿಕ್ಕುಗಳೇ ಸಂಕೇತ. ಬಾಚಣಿಕೆ ಜಾರಿ ಬಿದ್ದಾಗ, ಉನ್ಮತ್ತಳಾಗುವೆ... ಕಂಠ ಮಾಧುರ್ಯ, ಹೃದಯದಾಳದ ಆಕಾಂಕ್ಷೆಯನ್ನೇ ಧ್ವನಿಗೆ ತುಂಬಿದಂತೆ. ಅಲ್ಲಿ ಬೇಡಿಕೆ ಇದೆ, ಉನ್ಮಾದವಿದೆ.. ಕಣ್ಣೊಳಗೊಂದು, ಲಜ್ಜೆಯ ಪರದೆಯೊಂದಿಗೆ ತೆಳುವಾದ ಆಹ್ವಾನವೂ ಇದೆ.

ಪದ್ಮಶ್ರೀ ಪಾತ್ರದಲ್ಲಿರುವ ಹರಿಪ್ರಿಯಾ ನವಿಲುನೀಲಿ ಬಣ್ಣದ ಸೀರೆಯಲ್ಲಿ, ಮೆಟ್ಟಿಲಿಳಿಯುವಾಗ ಒಂದು ಕಾಲಿಗೆ ಗೆಜ್ಜೆ ಇತ್ತೇ ಎಂದು ದೃಷ್ಟಿ ನೆಡುವುದರಲ್ಲಿ, ಕಣ್ಸೆಳೆಯುತ್ತವೆ. ಮತ್ತದೇ ಧ್ವನಿ, ಕರುಣಿಸು ಅಪ್ಪುಗೆಯ...ಆ ಆರ್ತಧ್ವನಿಯಲ್ಲಿ ಜಮಾನಾವೊಂದರ ಮುನಿಸನ್ನು ಕರಗಿಸುವ ತವಕವಿದೆ.

ADVERTISEMENT

’ಸೂಜಿದಾರ’ ಚಿತ್ರದ ಹಾಡೊಂದರ ಕೊನೆಯ ಸಾಲುಗಳಿರುವ ಈ ಟೀಸರ್‌ ಅವರ ಪಾತ್ರವನ್ನು ಪರಿಚಯಿಸುತ್ತದೆಯಂತೆ. ನಿರ್ದೇಶಕ ಮೌನೇಶ್‌ ಬಡಿಗೇರ್‌ ಸಾಹಿತ್ಯವಿರುವ ಈ ರಚನೆಗೆ ಕೊನೆಯ ಸಾಲುಗಳನ್ನು ಜೋಡಿಸಿದವರು ವಿಕ್ರಮ್‌ ಹತ್ವಾರ್‌. ಪದಗಳಿಗೆ ಜೀವದುಂಬಿ, ಭಾವ ಹನಿಯುವಂತೆ ಹಾಡಿದವರು ಸಂಧ್ಯಾ ಪತಕಿ ಸಂತ. ಸಂಗೀತ ಭಿನ್ನಶಡ್ಜ ಅವರದ್ದು. ಹರಿಪ್ರಿಯಾ ಜನ್ಮದಿನಕ್ಕೆ ಟೀಸರ್‌ ಬಿಡುಗಡೆಯಾಗಿದೆ. ಎದೆಯ ತಂತುಗಳಲ್ಲಿ, ನಸುಕಂಪನ ಮೂಡಿಸಿ, ತುಸು ನಗೆಯರಳಿಸುವ ಈ ಟೀಸರ್‌ಗೆ ಈಗಾಗಲೇ 1.50 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.