ADVERTISEMENT

ರಾಮೇನಹಳ್ಳಿ ಜಗನ್ನಾಥ್ ಅವರ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಹೊಸ ವರ್ಷ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 0:01 IST
Last Updated 13 ಡಿಸೆಂಬರ್ 2025, 0:01 IST
ರಚನಾ ಇಂದರ್‌, ನಿಹಾರ್ ಮುಕೇಶ್
ರಚನಾ ಇಂದರ್‌, ನಿಹಾರ್ ಮುಕೇಶ್   

‘ಹೊಂದಿಸಿ ಬರೆಯಿರಿ’ ಸಿನಿಮಾ ಖ್ಯಾತಿಯ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿರುವ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರವು ಜ.1ರಂದು ತೆರೆಕಾಣಲಿದೆ. 

ಟ್ರೇಲರ್‌ ಬಿಡುಗಡೆಗೆ ನಟ ನವೀನ್‌ ಶಂಕರ್‌, ನಟಿಯರಾದ ಐಶಾನಿ ಶೆಟ್ಟಿ, ಭಾವನಾ ರಾವ್‌ ಸೇರಿದಂತೆ ‘ಹೊಂದಿಸಿ ಬರೆಯಿರಿ’ ತಂಡ ಸಾಥ್‌ ಕೊಟ್ಟಿತು. ಈ ಸಿನಿಮಾದಲ್ಲಿ ತೆಲುಗಿನ ಕಿರುತೆರೆಯಲ್ಲಿ ಹೆಸರು ಮಾಡಿರುವ ಕನ್ನಡದ ನಿಹಾರ್‌ ಮುಕೇಶ್‌ ನಾಯಕನಾಗಿ ನಟಿಸಿದ್ದು. ‘ಅಕ್ಷರ’ ಎಂಬ ಪಾತ್ರದಲ್ಲಿ ನಟಿ ರಚನಾ ಇಂದರ್‌ ಜೋಡಿಯಾಗಿದ್ದಾರೆ. ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರ ಮಾಡುತ್ತದೆ. ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಥಾಹಂದರ ಚಿತ್ರದಲ್ಲಿದೆ. 

‘ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ‘ನಾನು ನನ್ನ ಕನಸು’ ಆದಮೇಲೆ ರಾಜೇಶ್ ನಟರಂಗ ಅವರ ಜೊತೆಗೆ ತೆರೆಹಂಚಿಕೊಂಡಿದ್ದೇನೆ’ ಎಂದು ನಟಿ ಸಿತಾರಾ. 

ADVERTISEMENT

‘ಇದು ಬೇರೆ ಕಥೆಗೆ ಇಟ್ಟ ಶೀರ್ಷಿಕೆ. ನಾನು ನಿಹಾರ್ ಭೇಟಿಯಾದಾಗ ಈ ಕಥೆ ಬಗ್ಗೆ ಚರ್ಚೆ ಮಾಡಿದ್ದೆವು.‌ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯಲು ಶೀರ್ಷಿಕೆ ಮುಖ್ಯ. ಅದು ಜನಕ್ಕೆ ಹತ್ತಿರವಾಗಿ ಇರಬೇಕು ಹಾಗೂ ಕಥೆಗೆ ಸೂಕ್ತವಾಗಿರಬೇಕು. ಚಿತ್ರದಲ್ಲಿ ಕಲಾವಿದರ ದಂಡೇ‌ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿ‌ಬಂದಿವೆ’ ಎಂದರು ರಾಮೇನಹಳ್ಳಿ ಜಗನ್ನಾಥ್‌. 

ನಟ ನಿಹಾರ್ ಮುಖೇಶ್ ಮಾತನಾಡಿ, ‘ನಾನು ಮೈಸೂರು ಹುಡುಗ. ಧಾರಾವಾಹಿಗಳ ಜೊತೆಗೆ ನನ್ನ ಪಯಣ ಆರಂಭವಾಯಿತು. ‘ಹೊಂದಿಸಿ ಬರೆಯಿರಿ’ ಚಿತ್ರ ನೋಡಿದ ಮೇಲೆ ಜಗನ್ನಾಥ್‌ ಅವರ ಜೊತೆ ಕೆಲಸ ಮಾಡಬೇಕು ಎಂದುಕೊಂಡೆ. ಅದು ನನಸಾಗಿದೆ. ನಾನು ‘ಪೃಥ್ವಿ’ ಎಂಬ ಪಾತ್ರ ಮಾಡಿದ್ದೇನೆ’ ಎಂದರು. 

ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂದೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿದ್ದು, ರಾಮೇನಹಳ್ಳಿ ಜಗನ್ನಾಥ್‌ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ತೆಲುಗು ಆವೃತ್ತಿಯು ‘ಪ್ರಿಯಮೈನ ನಾನಾಕು’ ಎಂಬ ಶೀರ್ಷಿಕೆಯೊಂದಿಗೆ ರಿಲೀಸ್ ಆಗಲಿದೆ. ಚಿತ್ರಕ್ಕೆ ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ಜೋ ಕಾಸ್ಟ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.