ADVERTISEMENT

ತೆಲುಗು ನಟ ನಂದಮೂರಿ ತಾರಕ ರತ್ನ ಬೆಂಗಳೂರಿನಲ್ಲಿ ನಿಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 17:22 IST
Last Updated 18 ಫೆಬ್ರುವರಿ 2023, 17:22 IST
ನಂದಮೂರಿ ತಾರಕ ರತ್ನ
ನಂದಮೂರಿ ತಾರಕ ರತ್ನ   

ಬೆಂಗಳೂರು: ತೆಲುಗು ಚಿತ್ರನಟ, ತೆಲುಗು ದೇಶಂ ಪಕ್ಷದ ಮುಖಂಡ ನಂದಮೂರಿ ತಾರಕ ರತ್ನ (40) ಅವರು ನಗರದ ನಾರಾಯಣ ಹೃದಯಾಲಯದಲ್ಲಿ ಶನಿವಾರ ನಿಧನರಾದರು.

ಕಳೆದ ಜ. 27ರಂದು ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್‌ ನೇತೃತ್ವದಲ್ಲಿ ಕುಪ್ಪಂನಿಂದ ಹಮ್ಮಿಕೊಂಡ ‘ಯುವಗಳಂ’ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಂದು ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಅಮೆರಿಕದ ಹೃದಯ ತಜ್ಞರ ತಂಡವೊಂದು ಅವರ ಆರೋಗ್ಯದ ಮೇಲೆ ನಿಗಾ ಇರಿಸಿತ್ತು.

ತೆಲುಗು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ನಂದಮೂರಿ ಮೋಹನ ಕೃಷ್ಣ ಅವರ ಪುತ್ರರಾದ ತಾರಕ ರತ್ನ 1983ರ ಫೆ. 22ರಂದು ಹೈದರಾಬಾದ್‌ನಲ್ಲಿ ಜನಿಸಿದ್ದರು. ತಾರಕ ರತ್ನ ಅವರು ತೆಲುಗು ಚಿತ್ರರಂಗದ ಖ್ಯಾತ ತಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್‌ ಅವರ ಮೊಮ್ಮಗ. ನಂದಮೂರಿ ಬಾಲಕೃಷ್ಣ, ನಂದಮೂರಿ ಹರಿಕೃಷ್ಣ ಹಾಗೂ ಎನ್‌. ಚಂದ್ರಬಾಬು ನಾಯ್ಡು ಅವರ ಅವರ ಸೋದರಳಿಯನೂ ಹೌದು. ನಂದಮೂರಿ ಕಲ್ಯಾಣ ರಾಮ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಅವರು ತಾರಕರತ್ನ ಅವರ ಸೋದರ ಸಂಬಂಧಿಗಳು.

ADVERTISEMENT

ತಾರಕ ರತ್ನ ಅವರಿಗೆ ಪತ್ನಿ, ವಸ್ತ್ರವಿನ್ಯಾಸಕಿ ಅಲೇಖ್ಯಾ ರೆಡ್ಡಿ ಮತ್ತು ಪುತ್ರಿ ನಿಷ್ಕಾ ಇದ್ದಾರೆ.

2002ರಿಂದ ಕಳೆದ ವರ್ಷದವರೆಗೆ ಸುಮಾರು 22 ಚಲನಚಿತ್ರಗಳು ಹಾಗೂ ಒಂದು ವೆಬ್‌ ಸರಣಿಯಲ್ಲಿ ಅವರು ನಟಿಸಿದ್ದರು. ಒಕ್ಕಟೊ ನಂಬರ್‌ ಕುರ್ರಾಡು, ಯುವರತ್ನ, ತಾರಕ್‌, ಅಮರಾವತಿ ಅವರು ನಟಿಸಿದ ಪ್ರಮುಖ ಚಿತ್ರಗಳು. ಅಮರಾವತಿ ಚಿತ್ರದ ಖಳ ಪಾತ್ರದ ನಟನೆಗೆ ಅವರಿಗೆ ‘ನಂದಿ’ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ತಾರಕ ರತ್ನ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.