ನಟ ಮೋಹನ್ ಬಾಬು
ಚಿತ್ರಕೃಪೆ –ಎಕ್ಸ್
ಹೈದರಾಬಾದ್: ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ಖಾಸಗಿ ವಾಹಿನಿಯೊಂದರ ವರದಿಗಾರ ಸೇರಿದಂತೆ ಪತ್ರಕರ್ತರ ಕ್ಷಮೆ ಕೋರಿದ್ದಾರೆ.
ಕ್ಷಮೆ ಕೋರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ನನ್ನ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ತುಂಬಾ ಬೇಸರದ ಸಂಗತಿ. ನಾನು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮನೋಜ್ ನಡುವಿನ ವಿವಾದದ ಬಗ್ಗೆ ವರದಿ ಮಾಡಲು ಜಲಪಲ್ಲಿ ನಿವಾಸಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿತ್ತು. ಮೋಹನ್ ಬಾಬು ಹಾಗೂ ಹಿರಿಯ ಮಗ ವಿಷ್ಣು ಪತ್ರಕರ್ತರ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದಾರೆ ಎಂದು ಪತ್ರಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ದೂರು ಆಧರಿಸಿ, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನಟ ಮೋಹನ್ ಬಾಬು ಅವರು ನಮ್ಮ ಮೈಕ್ರೊಫೋನ್ ಅನ್ನು ಕಿತ್ತುಕೊಂಡು, ಅವಾಚ್ಯ ಪದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಮಾಧ್ಯಮವೊಂದರ ಛಾಯಾಗ್ರಾಹಕರು ತಿಳಿಸಿದ್ದರು. ಇದರ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಮೋಹನ್ ಬಾಬು ಅವರ ವರ್ತನೆಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಪ್ರತಿಭಟನೆಗಳು ಸಹ ನಡೆದಿದ್ದವು. ಇದೀಗ ಮೋಹನ್ ಬಾಬು ಅವರು ಕ್ಷಮೆ ಕೋರಿದ್ದಾರೆ.
'ಕೌಟುಂಬಿಕ ಕಲಹವು ಆಸ್ತಿಯ ಪಾಲಿಗಾಗಿ ಅಲ್ಲ. ನನ್ನ ಸ್ವಾಭಿಮಾನ ಹಾಗೂ ನನ್ನ ಹೆಂಡತಿ, ಮಕ್ಕಳ ಸುರಕ್ಷತೆಗಾಗಿ ಎಂದು ಮೋಹನ್ ಬಾಬು ಕಿರಿಯ ಪುತ್ರ ಮನೋಜ್ ಹೇಳಿದ್ದರು. ಕೌಟುಂಬಿಕ ಕಲಹವು ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಮೋಹನ್ ಬಾಬು ಹಿರಿಯ ಪುತ್ರ ವಿಷ್ಣು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.