ಗ್ರಾಮೀಣ ಸೊಗಡಿನ ಸಾಮಾಜಿಕ ಕಥಾಹಂದರ ಹೊಂದಿರುವ ‘ತಾಯವ್ವ’ ಚಿತ್ರ ತನ್ನೆಲ್ಲ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಗೀತಪ್ರಿಯಾ ನಟಿಸಿ, ನಿರ್ಮಿಸುವ ಈ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನವಿದೆ.
ನಟ ಸುದೀಪ್ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿ, ನಟಿ ಉಮಾಶ್ರೀ ‘ತಾಯವ್ವ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಿತ್ರ ಎರಡು ದಶಕಗಳ ಹಿಂದೆ ತೆರೆ ಕಂಡಿತ್ತು. ಅದೇ ಶೀರ್ಷಿಕೆಯ ಚಿತ್ರ ಈಗ ಮತ್ತೆ ಸಿದ್ಧವಾಗಿದ್ದು, ಸುದೀಪ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
‘ಗ್ರಾಮೀಣ ಪ್ರದೇಶದ ಸೂಲಗಿತ್ತಿ ಮಹಿಳೆಯ ಬದುಕು ಮತ್ತು ಆಕೆಯ ಸಾಮಾಜಿಕ ಕಳಕಳಿಯನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಸೂಲಗಿತ್ತಿ ನರಸಮ್ಮ ಅವರ ಬದುಕು ಮತ್ತು ಸಾಧನೆ ಈ ಸಿನಿಮಾ ಮಾಡಲು ಪ್ರೇರಣೆ. ಈ ಸಿನಿಮಾದ ಹೆಸರು ‘ತಾಯವ್ವ’ ಎಂದಿದ್ದರೂ, ಈ ಸಿನಿಮಾಕ್ಕೂ ದಶಕಗಳ ಹಿಂದೆ ಬಂದಿದ್ದ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾದ ಕಥೆಗೆ ಹೊಂದಾಣಿಕೆಯಾಗುತ್ತದೆ ಮತ್ತು ಸಾಮಾಜಿಕ ಸಂದೇಶವಿದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ ನಿರ್ಮಾಪಕಿ ಗೀತಪ್ರಿಯಾ.
ನಟಿ ಉಮಾಶ್ರೀ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದರೆ, ಶ್ರೀನಾಥ್ ಟ್ರೇಲರ್ ಬಿಡುಗಡೆ ಮಾಡಿ ತಂಡದ ಜತೆ ನಿಂತಿದ್ದರು. ತಾಯವ್ವನಾಗಿ ಸೂಲಗಿತ್ತಿ ಪಾತ್ರದಲ್ಲಿ ಗೀತಪ್ರಿಯಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಂತ ಆರ್ಯನ್ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.