ADVERTISEMENT

ಹೊಸಬರಿಂದಲೇ ಕೂಡಿರುವ ‘ಕಾಲೇಜ್ ಕಲಾವಿದ’ ಸಿನಿಮಾ ಜೂ.6ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 1:28 IST
Last Updated 31 ಮೇ 2025, 1:28 IST
ಚೈತ್ರಾ ಲೋಕನಾಥ್‌
ಚೈತ್ರಾ ಲೋಕನಾಥ್‌   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಕಾಲೇಜ್ ಕಲಾವಿದ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕಾಲೇಜು ಆವರಣದಲ್ಲಿನ ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ಸಂಜಯ್ ಮಳವಳ್ಳಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಖಳನಟ ಕೋಟೆ ಪ್ರಭಾಕರ್, ನಟ ನಿರ್ದೇಶಕ ನಾಗೇಂದ್ರ ಅರಸ್, ನಟ ಪ್ರಥಮ್‌ ಮೊದಲಾದವರು ಟ್ರೇಲರ್‌ ಬಿಡುಗಡೆಗೊಳಿಸಿ ಹೊಸತಂಡಕ್ಕೆ ಶುಭ ಹಾರೈಸಿದರು. 

‘ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ, ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಬರಹಗಾರ ಹಾಗೂ ಚಿತ್ರ ಸಾಹಿತಿ ಕೂಡ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮೊದಲ ಚಿತ್ರ. ನನ್ನ ಗುರುಗಳಾದ ಮಂಡ್ಯ ರಮೇಶ್ ಮಾರ್ಗದರ್ಶನ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಚಿತ್ರದ ಕುರಿತು ಹೇಳುವುದಾದರೆ, ಇದೊಂದು ಪ್ರೇಮಮಯ ಪಯಣ. ಮ್ಯೂಸಿಕಲ್ ಜರ್ನಿ ಹೊಂದಿರುವ ಈ ಸಿನಿಮಾದಲ್ಲಿ ಡ್ರಗ್ಸ್ ವಿಚಾರವೂ ಇದೆ. ಕಾಲೇಜು ವಿದ್ಯಾರ್ಥಿಗಳ ಸ್ನೇಹ, ಪ್ರೀತಿ, ಸಂಬಂಧ, ಹಾಸ್ಯ, ಫೈಟ್ ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರಿಕರಿಸಲಾಗಿದೆ. ಜೂನ್ 6ರಂದು ನಮ್ಮ ಚಿತ್ರ ಬಿಡುಗಡೆ ಆಗಲಿದೆ’ ಎಂದರು ನಿರ್ದೇಶಕರು. 

ಗಜಾನನ ಫಿಲ್ಮ್ಸ್ ಬ್ಯಾನರ್‌ನಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸರುವ ಆರವ್ ಸೂರ್ಯ ನಾಯಕರಾಗಿ‌ ಕಾಣಿಸಿಕೊಂಡಿದ್ದಾರೆ. ಅವರಿಗೆ ಚೈತ್ರ ಲೋಕನಾಥ್ ಜೋಡಿಯಾಗಿದ್ದಾರೆ. ಹುಲಿ ಕಾರ್ತಿಕ್‌, ಹರಿಣಿ ಶ್ರೀಕಾಂತ್‌, ರಮೇಶ್ ಭಟ್ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

‘ನಾನು 2016ರಿಂದ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುತ್ತಿರುವೆ. ಇದೊಂದು ಸುಂದರ ಪ್ರೇಮಕಥೆಯ ಚಿತ್ರ. ಚಿತ್ರದಲ್ಲಿ ನಾನೊಬ್ಬ ಸ್ಕೆಚ್ ಆರ್ಟಿಸ್ಟ್, ಕಾಲೇಜು ವಿದ್ಯಾರ್ಥಿಯಾಗಿ ನನ್ನದೊಂದು ಗೆಳೆಯರ ಗುಂಪಿರುತ್ತದೆ. ಮುದ್ದಾದ ಹುಡುಗಿ ನನ್ನ ಬದುಕಿಗೆ ಪ್ರವೇಶವಾದಾಗ ಆಗುವ ಏರಿಳಿತವೇ ಚಿತ್ರಕಥೆ’ ಎಂದರು ಆರವ್ ಸೂರ್ಯ.

ಸುರಾಜ್ ಜೋಯಿಸ್‌ ಸಂಗೀತ, ಆನಂದ್ ಸುಂದರೇಶ ಛಾಯಾಚಿತ್ರಗ್ರಹಣ, ಮಹೇಶ್ ಗಂಗಾವತಿ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.