ADVERTISEMENT

‘ನಡುಗಲ್ಲು’ ಸಿನಿಮಾದಲ್ಲಿ ಗುರು–ಶಿಷ್ಯರ ಸವಾಲು‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 10:19 IST
Last Updated 21 ಜುಲೈ 2020, 10:19 IST
‘ನಡುಗಲ್ಲು’ ಚಿತ್ರದಲ್ಲಿ ಬಲರಜವಾಡಿ ಮತ್ತು ನಿಶಾಂತ್ ಟಿ. ರಾಠೋಡ್‌
‘ನಡುಗಲ್ಲು’ ಚಿತ್ರದಲ್ಲಿ ಬಲರಜವಾಡಿ ಮತ್ತು ನಿಶಾಂತ್ ಟಿ. ರಾಠೋಡ್‌   

ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿರುವ ‘ನಾಗರಹಾವು’ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇದರಲ್ಲಿನ ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿಯ ಪಾತ್ರಗಳು ಗುರು–ಶಿಷ್ಯರ ನಡುವಿನ ಪ್ರೀತಿಯ ದ್ಯೋತಕವಾಗಿವೆ. ಗುರು–ಶಿಷ್ಯ ಪರಂಪರೆ ಸಾರುವ ಹಲವು ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಇದಕ್ಕೆ ಈಗ ಹೊಸ ಸೇರ್ಪಡೆ ‘ನಡುಗಲ್ಲು’ ಚಿತ್ರ.

‘ಬಂಗಾರಿ’, ‘ಬೆಟ್ಟದ ದಾರಿ’, ತಮಿಳಿನ ‘ಕಾದಲ್ ಪೈತ್ಯಂ’ ಸಿನಿಮಾ ನಿರ್ದೇಶಿಸಿರುವ ಮಾ. ಚಂದ್ರು ಅವರೇ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‌ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ನಡುಗಲ್ಲು ಎಂಬುದು ಒಂದು ಗ್ರಾಮ. ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಗುರು– ಶಿಷ್ಯರ ನಡುವೆ ಸವಾಲುಗಳು ನಡೆಯುತ್ತವೆ. ಅವುಗಳನ್ನು ಗುರು– ಶಿಷ್ಯರು ಹೇಗೆಲ್ಲಾ ಎದುರಿಸಿ ಪರಿಹರಿಸಿಕೊಳ್ಳುತ್ತಾರೆ. ಈ ಸವಾಲಿನಲ್ಲಿ ಯಾರು ಯಾರಿಗೆ ಸೋಲೊಪ್ಪುತ್ತಾರೆ ಎಂಬುದು ಇದರ ಕಥಾಹಂದರ.

ADVERTISEMENT

ಒಟ್ಟು 24 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುಳ್ಯ ತಾಲ್ಲೂಕಿನ ನಡುಗಲ್ಲು ಗ್ರಾಮದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಡಬ್ಬಿಂಗ್ ಕೆಲಸ ಪೂರ್ಣಗೊಂಡಿದ್ದು, ಹಿನ್ನೆಲೆ ಸಂಗೀತದ ಹಂತದಲ್ಲಿದೆ.

ಮೇಷ್ಟ್ರು ಪಾತ್ರದಲ್ಲಿ ಬಲರಾಜವಾಡಿ ನಟಿಸಿದ್ದಾರೆ. ಶಿಷ್ಯನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ನಿಶಾಂತ್ ಟಿ. ರಾಠೋಡ್‌. ಇದಕ್ಕೆ ಹರಿಹರನ್ ಬಿ.ಪಿ. ಬಂಡವಾಳ ಹೂಡಿದ್ದಾರೆ.

ಮಂಜುಳಾ ರೆಡ್ಡಿ, ಹರಿಹರನ್, ಅಮೃತಾ, ಕಿಲ್ಲರ್ ವೆಂಕಟೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಮಕ್ಕಳು ನಟಿಸಿದ್ದಾರೆ. ಛಾಯಾಗ್ರಹಣ ಜಾನ್ ಮತ್ತು ಸೂರ್ಯೋದಯ ಅವರದ್ದು. ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ನಿರ್ವಹಣೆ ರಾಜ್ ಅವರದ್ದು. ಡಾಲಿ ರಮೇಶ್ ನೃತ್ಯ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.