ADVERTISEMENT

ಮೀನಾಕ್ಷಿ ಕಥಾ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 2:11 IST
Last Updated 27 ಡಿಸೆಂಬರ್ 2019, 2:11 IST
ರಚಿತಾ ರಾಮ್‌ ಮತ್ತು ಕಲ್ಯಾಣ್ ದೇವ್
ರಚಿತಾ ರಾಮ್‌ ಮತ್ತು ಕಲ್ಯಾಣ್ ದೇವ್   

ನಟಿ ರಚಿತಾ ರಾಮ್‌ ತೆಲುಗಿನಲ್ಲಿ ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್‌ ಜೊತೆಗೆ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ. ಈ ಮೊದಲ ಇದಕ್ಕೆ ‘ಸೂಪರ್‌ ಮಚ್ಚಿ’ ಎಂಬ ಟೈಟಲ್‌ ಇಡಲಾಗಿತ್ತು.

ತೆಲುಗು ಸೇರಿದಂತೆ ಕನ್ನಡದಲ್ಲಿಯೂ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಪುಲಿ ವಾಸು. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಅವರ ಬೆನ್ನಗಿದೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ಕಲ್ಯಾಣ್ ದೇವ್ ನಟಿಸಿದ ಮೊದಲ ಚಿತ್ರ ‘ವಿಜೇತ’. ಇದು ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ತಮ್ಮ ಎರಡನೇ ಚಿತ್ರ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಮೂಲಕ ಕನ್ನಡ ಚಿತ್ರರಂಗಕ್ಕೂ ಅಡಿ ಇಡುತ್ತಿರುವ ಖುಷಿಯಲ್ಲಿದ್ದಾರೆ ಅವರು.

ADVERTISEMENT

ಈಗಾಗಲೇ, ಚಿತ್ರತಂಡ ಮೊದಲ ಹಂತದ ಚಿತ್ರೀಕರಣವನ್ನು ಹೋಳಿ ಹಾಡಿನೊಂದಿಗೆ ಪೂರ್ಣಗೊಳಿಸಿದೆ. ದ್ವಿತೀಯ ಹಂತದಲ್ಲಿ ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್, ವಿಶಾಖಪಟ್ಟಣದ ಸುತ್ತಮುತ್ತ ಅರವತ್ತು ದಿನಗಳ ಕಾಲ ಶೂಟಿಂಗ್‌ ನಡೆಸಲು ಯೋಜನೆ ರೂಪಿಸಿದೆ.

ಇನ್ನೆರಡು ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಏಪ್ರಿಲ್‌ ವೇಳೆಗೆ ಥಿಯೇಟರ್‌ಗೆ ಬರುವ ಆಲೋಚನೆಯಲ್ಲಿದೆ.

ರಿಜ್ವಾನ್ ಎಂಟರ್‌ಟೈನ್‍ಮೆಂಟ್ ಲಾಂಛನದಡಿ ರಿಜ್ವಾನ್ ಹಾಗೂ ಖುಷಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಶ್ರೀನಿವಾಸ್ ಜಿ. ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಎಸ್. ತಮನ್ ಸಂಗೀತ ಸಂಯೋಜಿಸಲಿದ್ದಾರೆ. ಮೂರು ಸಾಹಸ ದೃಶ್ಯಗಳಿದ್ದು, ಡ್ರ್ಯಾಗನ್ ಪ್ರಕಾಶ್ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ಯಾಮ್‌ ಕೆ. ನಾಯ್ಡು ಅವರದ್ದು. ಮಾರ್ತಾಂಡ್ ಕೆ. ವೆಂಕಟೇಶ್ ಅವರ ಸಂಕಲನವಿದೆ. ಆಟ ನಂದೀಶ್ ನೃತ್ಯ ಸಂಯೋಜಿಸಿದ್ದಾರೆ. ಬ್ರಹ್ಮ ಕಡಲಿ ಅವರ ಕಲಾ ನಿರ್ದೇಶನವಿದೆ. ಸಾಧುಕೋಕಿಲ, ಶಿವರಾಜ್ ಕೆ.ಆರ್. ಪೇಟೆ, ಪ್ರಗತಿ, ರಾಜೇಂದ್ರಪ್ರಸಾದ್, ಅಜೇಯ್, ನರೇಶ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.