ಕರ್ನಾಟಕದಲ್ಲಿ ‘ಥಗ್‌ಲೈಫ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡದೇ ಇರುವ ಕುರಿತ ತಮಿಳು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಪ್ರೇಮ್, ‘ನಾವೇನು ಬೇರೆ ಬೇರೆ ದೇಶದಲ್ಲಿಲ್ಲ. ಇನ್ನೂರು–ಮುನ್ನೂರು ಕಿಲೋಮೀಟರ್ ದೂರದಲ್ಲಿದ್ದೇವೆ ಅಷ್ಟೇ. ಎಲ್ಲರೂ ಒಂದೇ. ತಾಯಿಗೆ ಯಾರಾದರೂ ಬೈದರೆ ಸುಮ್ಮನಿರುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ.
‘ಕೆಡಿ’ ಸಿನಿಮಾದ ಪ್ರಚಾರಕ್ಕಾಗಿ ಪ್ರೇಮ್, ನಟ ಧ್ರುವ ಸರ್ಜಾ ಒಳಗೊಂಡ ತಂಡ ಚೆನ್ನೈನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತನಾಡಿದ ಪ್ರೇಮ್, ‘ಕನ್ನಡಿಗರಿಗೆ ಕಮಲ್ ಸರ್ ಅವರ ಹೇಳಿಕೆಯಿಂದ ನೋವಾಯಿತು. ಕರ್ನಾಟಕದಲ್ಲಿ ತಮಿಳು ಸಿನಿಮಾಗಳು ಬಿಡುಗಡೆ ಆಗುವುದು ಬೇಡ ಎಂದಿಲ್ಲ. ಕಮಲ್ ಸರ್ ಸಿನಿಮಾವಷ್ಟೇ ಬಿಡುಗಡೆ ಆಗುವುದು ಬೇಡ ಎಂದರು.
ಕ್ಷಮೆ ಕೇಳಬೇಕು ಎನ್ನುವುದು ಕನ್ನಡಿಗರ ಆಗ್ರಹವಾಗಿತ್ತು. ಕರ್ನಾಟಕದಲ್ಲಿ ಎಲ್ಲಾ ತಮಿಳು ಸಿನಿಮಾಗಳೂ ಚೆನ್ನಾಗಿ ಹೋಗುತ್ತವೆ. ನಾನೂ ತಮಿಳು ಸಿನಿಮಾಗಳನ್ನು ನೋಡುತ್ತೇನೆ. ಕರ್ನಾಟಕದಲ್ಲಿ ತಮಿಳು ಸಿನಿಮಾಗಳು ಒಳ್ಳೆಯ ಸಂಪಾದನೆ ಮಾಡುತ್ತವೆ’ ಎಂದಿದ್ದಾರೆ.
ಧ್ರುವ ಸರ್ಜಾ ಮಾತನಾಡಿ, ‘ಕರ್ನಾಟಕದಲ್ಲಿ ಹಲವು ತಮಿಳು ಸಿನಿಮಾಗಳು ಬಿಡುಗಡೆ ಆಗಿವೆ. ಯಾವುದನ್ನೂ ಯಾರೂ ತಡೆದಿಲ್ಲ. ಕಮಲ್ ಸರ್ ಅವರು ನೀಡಿದ ಒಂದು ಹೇಳಿಕೆಯಿಂದ ಎಲ್ಲರಿಗೂ ಬೇಸರವಾಗಿತ್ತು. ಎಲ್ಲರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಮಾತೃಭಾಷೆ ವಿಚಾರ ಬಂದಾಗ ಎಲ್ಲರೂ ಪ್ರತಿಕ್ರಿಯೆ ನೀಡುತ್ತಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.