ಬೆಂಗಳೂರು: ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿರುವ ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಅವರ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಿ ಮಾತುಕತೆ ನಡೆಸಿದ್ದೇವೆ. ಕಮಲ್ ಹಾಸನ್ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಮಲ್ ಅವರಿಂದ ಕ್ಷಮೆ ಕೇಳಿಸುತ್ತೇವೆ. ಕ್ಷಮೆ ಯಾಚಿಸದಿದ್ದರೆ ರಾಜ್ಯದಲ್ಲಿ ಅವರ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5ರಂದು ತೆರೆ ಕಾಣುತ್ತಿದೆ.
ಚೆನ್ನೈನಲ್ಲಿ ಶನಿವಾರ ನಡೆದ ‘ಥಗ್ ಲೈಫ್’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಕನ್ನಡದ ಕುರಿತಾಗಿ ಹೇಳಿಕೆ ನೀಡಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಕಮಲ್ ವಿರುದ್ಧ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕನ್ನಡಕ್ಕೆ ಪ್ರಾಚೀನ ಇತಿಹಾಸವಿದೆ. ಹಿರಿಮೆ, ಶ್ರೀಮಂತಿಕೆ ಹೊಂದಿದೆ. ಕಮಲ್ ಆ ಹೇಳಿಕೆ ಕೊಡುವ ಮುಂಚೆ ಯೋಚಿಸಬೇಕಿತ್ತು. ಅವರ ಹೇಳಿಕೆ ತಪ್ಪು. ಕಮಲ್ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದರೆ ಒಳ್ಳೆಯದುಸುಮಲತಾ, ನಟಿ, ಮಾಜಿ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.