ADVERTISEMENT

‘ಇಸ್ಮಾರ್ಟ್‌ ಶಂಕರ್‌’ ಆದ ರಾಮ್ ಪೋತಿನೇನಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:26 IST
Last Updated 16 ಜುಲೈ 2019, 13:26 IST
ಇಸ್ಮಾರ್ಟ್ ಶಂಕರ್‌
ಇಸ್ಮಾರ್ಟ್ ಶಂಕರ್‌   

ಟಾಲಿವುಡ್‌ನ ಎನೆರ್ಜೆಟಿಕ್ ಸ್ಟಾರ್ ಎಂದೇ ಖ್ಯಾತರಾಗಿರುವ ರಾಮ್‌ ಪೋತಿನೇನಿ ಅವರನ್ನು ಡ್ಯಾಷಿಂಗ್‌ ಡೈರೆಕ್ಟರ್‌ ಪೂರಿ ಜಗನ್ನಾಥ್ ಅವರು ‘ಇಸ್ಮಾರ್ಟ್ ಶಂಕರ್‌’ ರೂಪದಲ್ಲಿ ತೋರಿಸಲು ಮುಂದಾಗಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಮೊದಲ ಬಾರಿಗೆ ತೆರೆ ಕಾಣುತ್ತಿರುವ ಚಿತ್ರವಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮುಗಿಲುಮಟ್ಟಿವೆ.

ಈಗಾಗಲೇ ಚಿತ್ರದ ಎರಡು ಟ್ರೇಲರ್‌ಗಳನ್ನು ಚಿತ್ರತಂಡ ಬಿಡುಗಡೆಯಾಗಿದೆ. ಎರಡೂ ಟ್ರೇಲರ್‌ಗಳಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಇಷ್ಟು ದಿನ ರಾಮ್‌ ಅವರು ಮಾಡಿರುವ ಎಲ್ಲ ಚಿತ್ರಗಳಿಗಿಂತ ಈ ಚಿತ್ರ ಸಂಪೂರ್ಣ ಭಿನ್ನವಾಗಿದೆ ಎಂಬುದನ್ನಂತೂ ತೋರಿಸಿಕೊಟ್ಟಿದೆ.

ಚಿತ್ರ ಯಶಸ್ವಿಯಾದರೂ, ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಸೋತರೂ ಪುರಿ ಜನನ್ನಾಥ್ ಅವರ ನಿರೂಪಣಾ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹಲವು ವರ್ಷಗಳಿಂದ ಸಕ್ಸಸ್ ಕಾಣದೇ ಪರಿತಪಿಸುತ್ತಿರುವ ಪುರಿಯವರು ಈ ಚಿತ್ರದ ಮೂಲಕ ಮತ್ತೆ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ADVERTISEMENT

ಚಿತ್ರ ಟ್ರೇಲರ್‌ ನೋಡಿದರೆ, ಗನ್ಸ್, ಮಾಫಿಯಾ, ಪೊಲೀಸರ ಸುತ್ತಾ ಸುತ್ತವ ಚಿತ್ರ ಎಂಬುದು ಗೊತ್ತಾಗುತ್ತಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ‘A' ಸರ್ಟಿಫಿಕೇಟ್ ನೀಡಿದ್ದು, ಕುಟುಂಬ ಕಥಾ ಚಿತ್ರವಲ್ಲ ಎಂಬುದು ಸ್ಪಷ್ಟವಾಗಿದೆ. ಟ್ರೇಲರ್‌ನ ದೃಶ್ಯಗಳೂ ಇದನ್ನೇ ಧ್ವನಿಸುತ್ತಿವೆ.

ರಾಮ್‌ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ತೆಲಂಗಾಣದ ಪಡ್ಡೆ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡತಿ ನಭಾ ನಟೇಶ್‌ ಮತ್ತು ಬಾಲಿವುಡ್‌ನ ನಿಧಿ ಅಗರ್‌ವಾಲ್‌ ರಾಮ್‌ಗೆ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಿತ್ರ ₹17.5 ಕೋಟಿ ನಾನ್‌ ಥಿಯೇಟರಿಕಲ್ ಬಿಸಿನೆಸ್ ಮಾಡಿ ಸುದ್ದಿಯಾಗಿದೆ. ಕಾರಣ ಹಲವು ವರ್ಷಗಳಿಂದ ಉತ್ತಮ ಹಿಟ್‌ ಚಿತ್ರ ನೀಡಲು ವಿವಿಧ ಕಸರತ್ತು ನಡೆಸುತ್ತಿರುವ ರಾಮ್ ವೃತ್ತಿ ಜೀವನದಲ್ಲಿ ಈ ರೀತಿ ಅತಿ ಹೆಚ್ಚು ಬಿಸಿನೆಸ್ ಮಾಡಿರುವ ಚಿತ್ರ ಇದು.

ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿಕೌರ್ ಈ ಚಿತ್ರಕ್ಕೆ ಹಣ ಸುರಿದಿದ್ದು, ಮಣಿಶರ್ಮ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬ್ರಹ್ಮಾನಂದಂ, ಶಿಯಾಜಿ ಶಿಂಡೆ, ಆಶಿಷ್ ವಿದ್ಯಾರ್ಥಿ, ರಾವು ರಮೇಶ್, ಪ್ರಮುಖ ತಾರಗಣದಲ್ಲಿದ್ದಾರೆ. ಚಿತ್ರ ಜುಲೈ 18ಕ್ಕೆ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.