ADVERTISEMENT

‘ತ್ರಿಪುರ’ ನಿಧಿ ಶೋಧ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 10:02 IST
Last Updated 20 ಆಗಸ್ಟ್ 2019, 10:02 IST
ಅಶ್ವಿನಿ ಗೌಡ
ಅಶ್ವಿನಿ ಗೌಡ   

‘ತ್ರಿಪುರ’ ಸಪ್ತ ಸಹೋದರಿಯರ ರಾಜ್ಯಗಳಲ್ಲೊಂದು. ಇದೇ ಹೆಸರಿನಡಿ ಈಗ ಗಾಂಧಿನಗರದಲ್ಲಿ ಸಿನಿಮಾವೊಂದು ತಯಾರಾಗಿದೆ. ಆದರೆ ತ್ರಿಪುರ ರಾಜ್ಯದಲ್ಲೂ, ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಐನೂರು ವರ್ಷದ ಹಿಂದಿನ ತ್ರಿಪುರ ಎಂಬ ಊರಿನ ಸುತ್ತ ನಡೆಯುವ ಕಥೆ ಇದು. ಅಂದಹಾಗೆ ಇದು ಕಾಲ್ಪನಿಕ ಕಥಾನಕ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ‘ಮುಕ್ತಿ’ ಚಿತ್ರ ನಿರ್ದೇಶಿಸಿದ್ದ ಕೆ. ಶಂಕರ್‌ಗೆ ಇದು ದ್ವಿತೀಯ ಚಿತ್ರ.

‘ತ್ರಿಪುರ ಎಂಬ ಊರಿನಲ್ಲಿ ಸುರಸುಂದರಿ ಇರುತ್ತಾಳೆ. ಅವಳಿಗಾಗಿ ಇಬ್ಬರು ಮಹಾರಾಜರ ನಡುವೆ ಕದನ ನಡೆಯುತ್ತದೆ. ಒಬ್ಬ ರಾಜ ತನ್ನ ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಾನೆ. ಆ ವಂಶಸ್ಥರ ಸುತ್ತ ಕಥೆ ಸಾಗಲಿದೆ’ ಎಂದು ವಿವರಿಸಿದರು ಶಂಕರ್‌.

ADVERTISEMENT

ನಟ ಧರ್ಮ ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಿಧಿಯ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತದೆ. ಅದರ ಮೇಲೆ ನಮಗೂ ಆಸೆ ಮೂಡುತ್ತದೆ. ನ್ಯಾಯ, ಅನ್ಯಾಯದ ನಡುವೆ ಅದು ಯಾರಿಗೆ ಸೇರಬೇಕು ಎಂಬುದೇ ಚಿತ್ರದ ತಿರುಳು’ ಎಂದರು.

ಅಶ್ವಿನಿ ಗೌಡ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬೆಳಗಾವಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವು ಕಲ್ಪಿಸುವ ಕಾರ್ಯದಲ್ಲಿ ತೊಡಗಿ ಕೊಂಡಿರುವುದರಿಂದ ಅವರು ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು.

ಗೌರಿ ವೆಂಕಟೇಶ್‌ ಅವರ ಛಾಯಾಗ್ರಹಣ ಇದೆ. ಚಿತ್ರದಲ್ಲಿ ಒಂದು ಹಾಡು ಇದ್ದು ಬಿ.ಆರ್‌. ಹೇಮಂತ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಎಲ್‌. ಮಂಜುನಾಥ್‌ ಬಂಡವಾಳ ಹೂಡಿದ್ದಾರೆ.ಲಕ್ಷ್ಮಣ್‌ ರಾವ್‌, ರಮಾನಂದ್‌, ಡಿಂಗ್ರಿ ನಾಗರಾಜ್, ಶ್ರೀಧರ್‌ ತಾರಾಗಣದಲ್ಲಿದ್ದಾರೆ. ಮುಂದಿನ ತಿಂಗಳ ಮೊದಲ ವಾರ ಥಿಯೇಟರ್‌ಗೆ ಬರುವ ಯೋಚನೆ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.