ADVERTISEMENT

ಲಾಕ್‍ಡೌನ್‌ ಹೊತ್ತಿನ ‘ಒಂಜಿ ಕತೆ ಆತ್ಂಡ್’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 19:30 IST
Last Updated 22 ಏಪ್ರಿಲ್ 2020, 19:30 IST
.
.   

ಲಾಕ್‍ಡೌನ್ ಹೊತ್ತಲ್ಲಿ ಮನೆಗಳೊಳಗೇ ನಿರ್ಮಾಣವಾದ ತುಳು ಕಿರುಚಿತ್ರ ‘ಒಂಜಿ ಕತೆ ಆತ್ಂಡ್’ (ಒಂದು ಕತೆಯಾಗಿದೆ). ಪ್ರಜಾವಾಣಿ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಅವರು ಚಿತ್ರಕತೆ ಬರೆದು ನಿರ್ದೇಶಿಸಿದ ಈ ಕಿರುಚಿತ್ರ ಬೆಂಗಳೂರು, ಮಂಗಳೂರು, ಸುರತ್ಕಲ್, ಉಡುಪಿ ಮೊದಲಾದ ಸ್ಥಳಗಳಲ್ಲಿ ಒಂದೇ ದಿನ ಚಿತ್ರೀಕರಣಗೊಂಡಿದೆ!

ಇಲ್ಲಿ ಅಭಿನಯಿಸಿರುವ ಕಲಾವಿದರು ಮೊದಲ ಬಾರಿ ಕ್ಯಾಮೆರಾ ಮುಂದೆ ಬಂದವರು. ಲಾಕ್‌ಡೌನ್‌ ಅವಧಿಯಲ್ಲಿ, ಎಲ್ಲರೂ ತಮ್ಮ ಮನೆಗಳಲ್ಲಿಯೇ ಇದ್ದುಕೊಂಡು, ಒಂದೊಂದು ಭಾಗದ ಚಿತ್ರೀಕರಣ ಮಾಡಿದ್ದಾರೆ.

ಕಥೆಯೊಂದು ಶುರುವಾಗಿದ್ದು ಹೀಗೆ: ‘ನನ್ನ ಮನಸ್ಸಲ್ಲಿ ಕಿರುಚಿತ್ರವೊಂದರ ಐಡಿಯಾ ಇದೆ. ಕತೆ ಕೇಳ್ತೀರಾ’ ಎಂದು ಪ್ರಕಾಶ್ ಅವರು ಕುಟುಂಬದ ಸದಸ್ಯರಲ್ಲಿ ಕೇಳುವಾಗ ದೊರೆತ ಪ್ರತಿಕ್ರಿಯೆಗಳು ಭಿನ್ನವಾಗಿದ್ದವು. ಕತೆ ಕೇಳಲು ಸಮಯವಿಲ್ಲ ಎಂದು ಹೇಳುವ ಮಗ, ತನ್ನನ್ನು ನಾಯಕಿಯನ್ನಾಗಿ ಮಾಡುವುದಾದರೆ ಕತೆ ಕೇಳುವುದಾಗಿ ಹೇಳುವ ಸೊಸೆ, ಅಜ್ಜಿ ಕತೆ ಕೇಳಿಯೇ ಸಾಕಾಗಿದೆ ಎನ್ನುವ ಕುಟಂಬದ ಮತ್ತೊಬ್ಬ ಸದಸ್ಯ, ಹಾಡಲು ಅವಕಾಶ ಕೊಟ್ಟರೆ ಕತೆ ಕೇಳಬಹುದು...

ADVERTISEMENT

ಹೀಗೆ ಒಬ್ಬೊಬ್ಬರದ್ದು ಒಂದೊಂದು ಡಿಮ್ಯಾಂಡ್. ಅಷ್ಟೊತ್ತಿಗೆ, ‘ಎಲ್ಲರೂ ಇಲ್ಲಿ ಬನ್ನಿ, ಅತ್ತೆ ಕತೆ ಹೇಳ್ತಾರಂತೆ’ ಎಂದು ಕರೆಯುವಾಗ ಎಲ್ಲರೂ ಓಗೊಡುತ್ತಾರೆ. ಹಾಗಾದರೆ ಮಾಮಿ ಹೇಳುವ ಕತೆ ಎಂಥದ್ದು? ಅದು ಅಂತಿಂಥ ಕತೆಯಲ್ಲ ಜೀವನಾನುಭವದ ಕತೆ. 88ರ ಹರೆಯದ ಶಾರದಾ ಶೆಡ್ತಿ ತಮ್ಮ ನೆನಪಿನ ಸುರುಳಿ ಬಿಚ್ಚುತ್ತಾ ಅನುಭವಗಳನ್ನು ಹೇಳುವಾಗ ಅದನ್ನು ಕೇಳಲು ಕುಟುಂಬದವರು ಉತ್ಸುಕರಾಗುತ್ತಾರೆ. ‘ನಮ್ಮಮ್ಮ ಶಾರದೆ’ ಎಂದು ಬಿಳಿಹಾಳೆಯ ಮೇಲೆ ಮೂಡುವ ಅಕ್ಷರಗಳು ಶಾರದಾ ಅವರ ಅನುಭವ ಕಥನಗಳು ಎಂದು ಸಾಂಕೇತಿಕವಾಗಿ ತೋರಿಸುವ ಮೂಲಕ ಈ ಕಿರುಚಿತ್ರ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.