ADVERTISEMENT

ಹ್ಯಾಪಿ ಬರ್ತಡೇ ಟು 'ಇಂಡಿಯನ್‌' ಕಮಲ್‌ ಹಾಸನ್‌

ರವೀಂದ್ರ ಗಂಗಲ್‌
Published 7 ನವೆಂಬರ್ 2019, 4:55 IST
Last Updated 7 ನವೆಂಬರ್ 2019, 4:55 IST
   

ದಪ್ಪ ಮೀಸೆ, ತುಂಬಿದ ಗಲ್ಲ, ತೇಲುಗಣ್ಣು, ನವರಸ ಹೊರಚೆಲ್ಲುವ ಹಾವಭಾವದ ಮೂಲಕ ಜಾಗತಿಕ ಸಿನಿಮಾ ಪ್ರೇಮಿಗಳ ಮನಗೆದ್ದಿರುವ ನಟ ಕಮಲ್‌ ಹಾಸನ್‌, ಇಂದು 65ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಕಮಲ್‌ ತಮ್ಮ ನಟನೆ, ಬರವಣಿಗೆ, ಗಾಯನ, ನಿರ್ದೇಶನ ಮತ್ತು ನಿರ್ಮಾಣ ಕೌಶಲಗಳಿಂದ ಹೆಸರು ಮಾಡಿದ್ದಾರೆ. ಆ ಕಾರಣಕ್ಕೆ ಅವರು ಯುನಿವರ್ಸಲ್‌ ಸ್ಟಾರ್‌ ಎಂದು ಖ್ಯಾತಿ ಪಡೆದಿದ್ದಾರೆ. ಆ ಮೂಲಕ ಕಮಲ್‌ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ.

ತಮ್ಮ ಎಳೆವಯಸ್ಸಿನಲ್ಲೇ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ಕಮಲ್‌ ಉತ್ತಮ ಬಾಲನಟ ಪ್ರಶಸ್ತಿ ಗಳಿಸಿದ ಖ್ಯಾತಿ ಹೊಂದಿದವರು. 60 ವರ್ಷಗಳ ತಮ್ಮ ಚಿತ್ರ ಬದುಕಿನಲ್ಲಿ ಕಮಲ್‌ ಹಾಸನ್‌ ನಟನೆಯ ಉನ್ನತಿಗೆ ತಲುಪಿದವರು. ತಮ್ಮ ಜೀವಮಾನದ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ, ಪ್ರಿಕ್ಸ್ ಹೆನ್ರಿ-ಲ್ಯಾಂಗ್ಲೋಯಿಸ್ ಫ್ರೆಂಚ್ ಪುರಸ್ಕಾರ ಸೇರಿದಂತೆ ಹತ್ತು–ಹಲವು ಪುರಸ್ಕಾರಗಳಿಗೆ ಭಾಜನರಾದವರು. ವಿಶಿಷ್ಟ ನಟನೆಗೆ ಪ್ರೇಕ್ಷಕರ ಮನಸೂರೆಗೊಂಡಿರುವ ಕಮಲ್‌ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 17 ದಕ್ಷಿಣ ಭಾರತ ಫಿಲ್ಮ್‌ಫೇರ್ ಪ್ರಶಸ್ತಿ, 3 ನಂದಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು.

ADVERTISEMENT

ಅಪೂರ್ವ ರಾಗಂಗಳ್, ಮೂಂದ್ರಮ್ ಪಿರಾಯ್, ಸಾಗರ ಸಂಗಮಂ, ನಾಯಗನ್, ಥೇವರ್ ಮಗನ್, ಹೇ ರಾಮ್‌, ಇಂಡಿಯನ್‌ ಮತ್ತು ವಿಶ್ವರೂಪಂ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಚಿತ್ರಗಳಲ್ಲಿ ಕಮಲ್‌ ನಟಿಸಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಸಿನೆಮಾ ಜಗತ್ತಿನಿಂದ ಇತ್ತೀಚೆಗೆ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಕಮಲ್‌ 'ಮಕ್ಕಳ ನಿಧಿ ಮೈಯಮ್‌‘ ಎನ್ನುವ ಪಕ್ಷವನ್ನು ಕಟ್ಟಿದ್ದಾರೆ. ಆ ಮೂಲಕ ತಮಿಳು ರಾಜಕಾರಣದಲ್ಲೂ ಮಿಂಚುವ ಸನ್ನಾಹದಲ್ಲಿದ್ದಾರೆ.

ಇಂತಹ ಮೇರು ವ್ಯಕ್ತಿತ್ವಕ್ಕೆ ಕುಟುಂಬ ಸದಸ್ಯರು, ಭಾರತೀಯ ಚಿತ್ರರಂಗದ ಗಣ್ಯರು, ಕೋಟ್ಯಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ. ಟ್ವಿಟರ್‌ನಲ್ಲಿ #HappyBirthdayKamalhaasan ಹ್ಯಾಷ್‌ಟ್ಯಾಗ್‌ ಇಂಡಿಯಾ ಟ್ರಿಂಡಿಂಗ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.