ADVERTISEMENT

ಆಟೊ ಚಾಲಕರಿಗೆ ದಿನಸಿ ಕಿಟ್‌ ನೀಡಲು ₹3 ಲಕ್ಷ ನೀಡಿದ ಉಪೇಂದ್ರ ಅಣ್ಣ

​ಪ್ರಜಾವಾಣಿ ವಾರ್ತೆ
Published 24 ಮೇ 2021, 12:13 IST
Last Updated 24 ಮೇ 2021, 12:13 IST
ಸುಧೀಂದ್ರ ಹಾಗೂ ವೀಣಾ
ಸುಧೀಂದ್ರ ಹಾಗೂ ವೀಣಾ   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ಜನರಿಗೆ ನಟ ಉಪೇಂದ್ರ ಅವರು ಹಲವು ರೀತಿಯಲ್ಲಿ ನೆರವಾಗುತ್ತಿದ್ದಾರೆ. ಮಂಗಳಮುಖಿಯರು, ಆಟೊ ಚಾಲಕರು, ಸಿನಿಮಾ ರಂಗದ ಕಾರ್ಮಿಕರು, ಅರ್ಚಕರು ಹೀಗೆ ಸಾವಿರಾರು ಜನರಿಗೆ ದಿನಸಿ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಸ್ವಂತ ಅಣ್ಣ ಸುಧೀಂದ್ರ ಅವರೂ ಇದೀಗ ಕೈಜೋಡಿಸಿದ್ದಾರೆ.

ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರು ತಮ್ಮ 26ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಟೊ ಚಾಲಕರಿಗೆ ಕಿಟ್ ವಿತರಿಸಲು ₹3 ಲಕ್ಷ ನೀಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಉಪೇಂದ್ರ ಮಾಹಿತಿ ನೀಡಿದ್ದಾರೆ. ಜೊತೆಗೆ ಅಣ್ಣ ಸುಧೀಂದ್ರ ಹಾಗೂ ಅತ್ತಿಗೆ ವೀಣಾ ಅವರ ಫೋಟೊವನ್ನು ಉಪೇಂದ್ರ ಅಪ್‌ಲೋಡ್‌ ಮಾಡಿ ‘ಧನ್ಯವಾದಗಳು’ ಎಂದಿದ್ದಾರೆ.

ಕನ್ನಡ ಚಲನಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ ಎಂದು ಉಪೇಂದ್ರ ತಿಳಿಸಿದ್ದರು. ಇದರ ಬೆನ್ನಲ್ಲೇ ಖ್ಯಾತ ನಟಿ ಬಿ. ಸರೋಜಾ ದೇವಿ ಅವರು ₹4 ಲಕ್ಷ, ನಟ ಸಾದುಕೋಕಿಲ ಅವರು ₹2.5 ಲಕ್ಷ ಹಾಗೂ ಹಲವು ನಟರು, ನಿರ್ಮಾಪಕರು ದೇಣಿಗೆ ನೀಡಿ ಉಪೇಂದ್ರ ಅವರ ಕೈಜೋಡಿಸಿದ್ದರು. ಜನಸಾಮಾನ್ಯರೂ ತಮ್ಮ ಕೈಲಾದ ದೇಣಿಗೆ, ವಸ್ತುಗಳನ್ನು ಸಂಕಷ್ಟದಲ್ಲಿರುವ ಜನರಿಗೆ ನೀಡಲು ಉಪೇಂದ್ರ ಅವರಿಗೆ ಒಪ್ಪಿಸುತ್ತಿದ್ದಾರೆ.

ADVERTISEMENT

ಲಾಕ್‌ಡೌನ್‌ ಕಾರಣದಿಂದಾಗಿ ಬೆಳೆದ ಬೆಳೆಯನ್ನು ಮಾರಲಾಗದೆ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೂ ಉಪೇಂದ್ರ ಧಾವಿಸಿದ್ದು, ರಾಜ್ಯದ ಹಲವೆಡೆಯಿಂದ ರೈತರಿಂದ ನೇರವಾಗಿ ತರಕಾಗಿಗಳನ್ನು ಖರೀದಿಸಿ, ಅದರ ಸಾರಿಗೆ ವೆಚ್ಚವನ್ನೂ ನೀಡಿ ದಿನಸಿ ಕಿಟ್‌ ಜೊತೆಯಲ್ಲಿ ನೀಡುತ್ತಿದ್ದಾರೆ. ಚಿತ್ರೀಕರಣವೆಲ್ಲ ಸ್ತಬ್ಧವಾಗಿರುವ ಕಾರಣ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ನೆರವಿಗೂ ಉಪೇಂದ್ರ ಧಾವಿಸಿದ್ದು, ಅವರಿಗೆ 25 ಕೆ.ಜಿ. ಅಕ್ಕಿ, ಗೋಧಿ ಚೀಲ, ತರಕಾರಿ, ಹಣ್ಣಿನ ಕಿಟ್‌ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.