ADVERTISEMENT

‘ಬುದ್ಧಿವಂತ’ನಾಗಿ ಮತ್ತೊಮ್ಮೆ ತೆರೆಮೇಲೆ ಬರಲು ಸಜ್ಜಾದ ರಿಯಲ್‌ ಸ್ಟಾರ್‌ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 19:30 IST
Last Updated 25 ಜುಲೈ 2023, 19:30 IST
ಉಪೇಂದ್ರ 
ಉಪೇಂದ್ರ    

ಸದ್ಯ ‘UI’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ಉಪೇಂದ್ರ ‘ಬುದ್ಧಿವಂತ’ನಾಗಿ ಮತ್ತೊಮ್ಮೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಅವರ ನಟನೆಯ ‘ಬುದ್ಧಿವಂತ–2’ ಯಾವಾಗ ರಿಲೀಸ್‌ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರವು ಸೆ.15ರಂದು ತೆರೆಕಾಣಲಿದೆ.

ವಿಡಿಯೋ ತುಣುಕೊಂದರ(ಗ್ಲಿಮ್ಸ್‌) ಮೂಲಕ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಚಂದನವನದಲ್ಲಿ ತಮ್ಮ ನಿರ್ದೇಶನದ ಸಾಮರ್ಥ್ಯದ ಕಾರಣ ಬುದ್ಧಿವಂತ ಎಂದೇ ಉಪೇಂದ್ರ ಕರೆಯಲ್ಪಡುತ್ತಾರೆ. ‘ಬುದ್ಧಿವಂತ’ ಸಿನಿಮಾ ಮೂಲಕ ಹಲವು ರೂಪದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಉಪೇಂದ್ರ, ಬುದ್ಧಿವಂತನಾಗಿ ಮತ್ತೆ ಬರುತ್ತಿರುವುದಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.

ಸೆ.18 ಉಪೇಂದ್ರ ಅವರ ಜನ್ಮದಿನ. ಈ ಸಂದರ್ಭದಲ್ಲೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯರಾಗಿ ಸೋನಲ್‌ ಮೊಂತೆರೋ ಹಾಗೂ ಮೇಘನರಾಜ್ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ನಿರ್ಮಾಪಕ ಟಿ.ಆರ್ ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ‘ಬುದ್ಧಿವಂತ 2’. ಜೈದೇವ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್. ನವೀನ್ ಕುಮಾರ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.