‘ಬಜಾರ್’, ‘ಬೈ ಟು ಲವ್’ ಸಿನಿಮಾ ಖ್ಯಾತಿಯ ನಟ ಧನ್ವೀರ್ ನಟನೆಯ ಹೊಸ ಸಿನಿಮಾ ‘ವಾಮನ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಎರಡು ಹಾಡುಗಳ ಮೂಲಕ ಸದ್ದು ಮಾಡಿರುವ ಈ ಸಿನಿಮಾದ ಆ್ಯಕ್ಷನ್ ಟೀಸರ್ ಆಗಸ್ಟ್ 17ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.
ಆ್ಯಕ್ಷನ್ ಟೀಸರ್ ಬಿಡುಗಡೆ ಸಂದರ್ಭದಲ್ಲೇ ಚಿತ್ರತಂಡ ರಿಲೀಸ್ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್‌ನಡಿ ಚೇತನ್ ಗೌಡ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದು ಇವರ ನಿರ್ಮಾಣದ ಚೊಚ್ಚಲ ಸಿನಿಮಾ. ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಖಳನಟನಾಗಿ ತೆಲುಗು ಚಿತ್ರರಂಗದ ಖ್ಯಾತ ಬಹುಭಾಷಾ ನಟ ಸಂಪತ್ ನಟಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೂ ಶಂಕರ್ ರಾಮನ್ ಅವರದ್ದು.
ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನವಿದ್ದು, ಮಹೇನ್ ಸಿಂಹ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್ ನೃತ್ಯ ನಿರ್ದೇಶನವಿದೆ. ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ‘ಏಕ್ ಲವ್ ಯಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ರೀಷ್ಮಾ ನಾಣಯ್ಯ ಧನ್ವೀರ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ತಾರಾ, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕೆ.ಜಿ.ಸಚ್ಚು, ಅರುಣ್ ಶ್ರೀರಾಮಯ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.